ಮುಂಬೈ: ಪಾಡ್ಕಾಸ್ಟರ್ ರಣವೀರ್ ಅಲ್ಲಾಬಾಡಿಯಾ(Ranveer Allahbadia)ವರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಮುಂಬೈ ಪೊಲೀಸರು ಶನಿವಾರ(ಫೆಬ್ರವರಿ 15) ತಿಳಿಸಿದ್ದಾರೆ. ಏಕೆಂದರೆ ಅವರ ಫೋನ್ ಸತತ ಎರಡನೇ ದಿನವೂ ಸ್ವಿಚ್ ಆಫ್ ಆಗಿದೆ. ಪೊಲೀಸರು ನಿನ್ನೆ ವಿಚಾರಣೆಗೆಂದು ಅಲ್ಲಾಬಾಡಿಯಾ ಅವರ ವರ್ಸೋವಾ ಮನೆಗೆ ತಲುಪಿದಾಗ ಮನೆ ಲಾಕ್ ಆಗಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಮುಂಬೈ ಪೊಲೀಸರು ಕನಿಷ್ಠ ಎಂಟು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನು ಓದಿ: ನಾನು ಆ ರೀತಿ ಹೇಳಬಾರದಿತ್ತು.. ಕ್ಷಮೆಯಾಚಿಸುವೆ; ರಣವೀರ್ ಅಲ್ಲಾಬಾಡಿಯಾ ಹೀಗೇಳಿದ್ದೇಕೆ? | Ranveer Allahbadia
ಮುಂಬೈ ಮತ್ತು ಅಸ್ಸಾಂ ಪೊಲೀಸರ ತಂಡಗಳು ಇಂದು ಬೆಳಗ್ಗೆ ವರ್ಸೋವಾದಲ್ಲಿರುವ ಅಲ್ಲಾಬಾಡಿಯಾ ಅವರ ಫ್ಲ್ಯಾಟ್‌ಗೆ ಹೋಗಿವೆ. ಆದರೆ ಇಂದು ಕೂಟ ಅವರ ಮನೆ ಲಾಕ್ ಆಗಿದ್ದು ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದ ಬಳಿಕ ಎರಡೂ ಪೊಲೀಸ್ ತಂಡಗಳು ಖಾರ್ ಪೊಲೀಸ್ ಠಾಣೆಗೆ ಹಿಂತಿರುಗಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪಾಲಕರು ಮತ್ತು ಲೈಂಗಿಕತೆಯ ಬಗ್ಗೆ ರಣವೀರ್ ಅಲ್ಲಾಬಾಡಿಯಾ ಅವರು ಅಸಭ್ಯ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳು ಭಾರೀ ಆಕ್ರೋಶಕ್ಕೆ ಕಾರಣವಾದ ನಂತರ ಮುಂಬೈ ಪೊಲೀಸರು ಅವರನ್ನು ವಿಚಾರಣೆಗೆ ಕರೆಸಿರುವುದು ಇದು ಮೂರನೇ ಬಾರಿ. ಈ ವಾರದ ಆರಂಭದಲ್ಲಿ ರಣವೀರ್ ಅಲ್ಲಾಬಾಡಿಯಾ ಅವರು ತಮ್ಮ ವರ್ಸೋವಾ ಮನೆಯಲ್ಲಿ ಹೇಳಿಕೆ ದಾಖಲಿಸುವಂತೆ ಪೊಲೀಸರನ್ನು ಕೋರಿದ್ದರು. ಆದರೆ ಪೊಲೀಸರು ಅವರ ವಿನಂತಿಯನ್ನು ತಿರಸ್ಕರಿಸಿದ್ದರು.
ಏತನ್ಮಧ್ಯೆ, ಮುಂಬೈ ಪೊಲೀಸರು ಸಮಯ್ ರೈನಾ ಅವರಿಗೆ ಭಾರತಕ್ಕೆ ಮರಳಲು ಮತ್ತು ತನಿಖೆಗೆ ಸೇರಲು ಮಾರ್ಚ್ 10ರವರೆಗೆ ಗಡುವು ನೀಡಿದ್ದಾರೆ. ಸಮಯ್ ರೈನಾ ಅವರ ವಕೀಲರು ಶನಿವಾರ ಪ್ರಕರಣದ ತನಿಖಾ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಸಮಯ ಕೋರಿದರು. ರೈನಾ ಅಮೆರಿಕದಲ್ಲಿದ್ದು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಮಯ್ ರೈನಾ ಅವರ ವಕೀಲರ ಮನವಿಯನ್ನು ಸ್ವೀಕರಿಸಿದ ಮುಂಬೈ ಪೊಲೀಸರು ಅವರಿಗೆ ಹೆಚ್ಚಿನ ಸಮಯ ನೀಡಿದ್ದಾರೆ. ಸಮಯ್ ರೈನಾ ಅವರನ್ನು ಮಾರ್ಚ್ 10 ರೊಳಗೆ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ರಣವೀರ್ ಅಲ್ಲಾಬಾಡಿಯಾಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ; ಕಾರಣ ಹೀಗಿದೆ.. | Ranveer Allahbadia