ನಾನು ಆ ರೀತಿ ಹೇಳಬಾರದಿತ್ತು.. ಕ್ಷಮೆಯಾಚಿಸುವೆ; ರಣವೀರ್ ಅಲ್ಲಾಬಾಡಿಯಾ ಹೀಗೇಳಿದ್ದೇಕೆ? | Ranveer Allahbadia

Untitled design (2)
Published on

ಮುಂಬೈ: ಅಶ್ಲೀಲ ಹೇಳಿಕೆಯಿಂದ ಟೀಕೆಗೆ ಗುರಿಯಾದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ(Ranveer Allahbadia) ಕ್ಷಮೆಯಾಚಿಸಿದ್ದಾರೆ. ಸೋಮವಾರ(ಫೆಬ್ರವರಿ 10) ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ನನ್ನ ಕಾಮೆಂಟ್ ಸರಿಯಿಲ್ಲ ಅಥವಾ ತಮಾಷೆಯಾಗಿಯೂ ಇರಲಿಲ್ಲ. ಆದ್ದರಿಂದ ನಾನು ನಿಮ್ಮೆಲ್ಲರ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಇಂಡಿಯಾಸ್ ಗಾಟ್ ಲ್ಯಾಟೆಂಟ್​​ ನಲ್ಲಿ ಹೇಳಿದ್ದನ್ನು ಹೇಳಬಾರದಿತ್ತು ಎಂಬ ಶೀರ್ಷಿಕೆ ನೀಡಿರುವ ರಣವೀರ್​ ಅಲ್ಲಾಬಾಡಿಯಾ ಅವರು ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಕಾಮೆಂಟ್ ಸರಿಯಾಗಿರಲಿಲ್ಲ, ತಮಾಷೆಯೂ ಅಲ್ಲ, ನಾನು ಹಾಸ್ಯದಲ್ಲಿ ಪರಿಣಿತನಲ್ಲ. ನಾನು ಕ್ಷಮೆ ಕೇಳುತ್ತಿದ್ದೇನೆ. ನಿಮ್ಮಲ್ಲಿ ಹಲವರು ನನ್ನ ವೇದಿಕೆಯನ್ನು ಈ ರೀತಿ ಬಳಸಲು ಬಯಸುತ್ತೀರಾ ಎಂದು ಕೇಳಿದ್ದೀರಿ? ಇಲ್ಲ, ನಾನು ಅದನ್ನು ಆ ರೀತಿ ಬಳಸಲು ಬಯಸುವುದಿಲ್ಲ. ನಾನು ಹೇಳಿದ್ದಕ್ಕೆ ಯಾವುದೇ ನೆಪ ಹೇಳುವುದಿಲ್ಲ, ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಕುಟುಂಬವನ್ನು ನಾನು ಎಂದಿಗೂ ಅವಮಾನಿಸಲು ಬಯಸುವುದಿಲ್ಲ. ಈ ಇಡೀ ವಿಷಯದಿಂದ ನಾನು ಕಲಿತದ್ದೇನೆಂದರೆ ಈ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಬೇಕಾಗಿದೆ. ನಾನು ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಇದರೊಂದಿಗೆ ವಿವಾದಾತ್ಮಕ ಕ್ಲಿಪ್​​ ಅನ್ನು ವಿಡಿಯೋದಿಂದ ತೆಗೆದುಹಾಕುವಂತೆ ಕಾರ್ಯಕ್ರಮದ ನಿರ್ಮಾಪಕರನ್ನು ಕೇಳಿಕೊಂಡಿದ್ದೇನೆ. ನೀವು ನನ್ನನ್ನು ಕ್ಷಮಿಸುವಿರಿ ಎಂದು ನಾನು ಭಾವಿಸುತ್ತೇನೆ ಎಂದು ಎಂದು ರಣವೀರ್​ ಅಲ್ಲಾಬಾಡಿಯಾ ಹೇಳಿದರು.

ರಣವೀರ್, ಸಮಯ್ ರೈನಾ ಮತ್ತು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಜನರ ವಿರುದ್ಧ ಮೊದಲು ಮುಂಬೈನಲ್ಲಿ ಮತ್ತು ನಂತರ ದೆಹಲಿಯಲ್ಲಿ ದೂರು ದಾಖಲಿಸಲಾಯಿತು.

ವಿಷಯ ಏನು

ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಇತ್ತೀಚೆಗೆ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ, ರಣವೀರ್ ಅಲ್ಲಾಬಾಡಿಯಾ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಅವರು ಪಾಲಕರ ಬಗ್ಗೆ ತುಂಬಾ ಆಕ್ಷೇಪಾರ್ಹವಾದ ಮಾತನ್ನು ಹೇಳಿದರು. ಇದಾದ ನಂತರ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಟೀಕಿಸಲಾಯಿತು. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚಾದವು.

ರಣವೀರ್ ಅಲ್ಲಾಬಾಡಿಯಾ ಯಾರು?

ರಣವೀರ್ ಒಬ್ಬ ಪ್ರಸಿದ್ಧ ಯೂಟ್ಯೂಬರ್. ಅವರು ಭಾರತದ ಅತ್ಯುತ್ತಮ ಯೂಟ್ಯೂಬ್ ಕಂಟೆಂಟ್ ಪ್ರಶಸ್ತಿ ಮತ್ತು ಅತ್ಯಂತ ಸ್ಟೈಲಿಶ್ ಉದ್ಯಮಿ ಪ್ರಭಾವಿ ಪ್ರಶಸ್ತಿಯನ್ನು ಪಡೆದಿದ್ದಾರೆ. ರಣವೀರ್ ಅಲ್ಲಾಬಾಡಿಯಾ ಬಾಲಿವುಡ್, ಹಾಲಿವುಡ್ ಸೆಲಿಬ್ರಿಟಿಗಳು, ಜ್ಯೋತಿಷಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಸಂದರ್ಶಿಸುತ್ತಿದ್ದಾರೆ. ರಣವೀರ್ ತಮ್ಮ ಪಾಡ್‌ಕ್ಯಾಸ್ಟ್, ಸ್ಟೈಲಿಶ್ ಲುಕ್ ಮತ್ತು ಫಿಟ್‌ನೆಸ್‌ನಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ರಣವೀರ್ 'ಬೇರ್ ಬೈಸೆಪ್ಸ್' ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ರಣವೀರ್ ಯೂಟ್ಯೂಬ್ ಮತ್ತು ಪಾಡ್‌ಕ್ಯಾಸ್ಟ್‌ಗಳಿಂದ ತಿಂಗಳಿಗೆ ಸುಮಾರು 35 ಲಕ್ಷ ರೂ. ಗಳಿಸುತ್ತಾರೆ ಎನ್ನಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net