ಕೇಂದ್ರ ಸರ್ಕಾರ ದೇಶದ ಜನರಿಗೆ ಖಾಲಿ ಚೊಂಬು ಕೊಟ್ಟಿದೆ! ಇದೇ ಕಾರಣಕ್ಕೆ ಬಿಜೆಪಿ ವಿರುದ್ಧ... ಸಿಎಂ ಲೇವಡಿ

WhatsApp Image 2024-04-20 at 5.06.58 PM
Published on

ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಮೈತ್ತಿ ಪಕ್ಷಗಳ ನಡುವೆ ಲೋಕ ಸಮರದ ಜಿದ್ದಾಜಿದ್ದಿ ಬಿರುಸಿನಿಂದ ಸಾಗುತ್ತಿದ್ದು, ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಬಿಜೆಪಿಯೊಂದಿಗೆ ಸೇರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೋಮುವಾದಿಯಾಗಿದ್ದು, ಜೆಡಿಎಸ್ ಸಹ ಕೋಮುವಾದಿ ಪಕ್ಷವಾಗಿ ಮಾರ್ಪಾಡು ಹೊಂದಿದೆ. ಹೀಗಾಗಿ ಜಾತ್ಯತೀತ ಎಂಬ ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಪಕ್ಷವನ್ನು ವಿಸರ್ಜಿಸುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಜೆಡಿಎಸ್ ಕಂಡರೆ ಸಿದ್ದರಾಮಯ್ಯಗೆ ಭಯ’ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನನಗೆ ಜೆಡಿಎಸ್‌ನ ಭಯ ಇಲ್ಲ. ಜೆಡಿಎಸ್ ಹಾಗೂ ಬಿಜೆಪಿಗೆ ಕಾಂಗ್ರೆಸ್‌ನ ಭಯ ಇರುವ ಹಿನ್ನೆಲೆಯಲ್ಲಿ ಆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ನಮ್ಮ ಭಯ ಕಾಡುತ್ತಿರುವುದರಿಂದಲೇ ಅವರು ಮೈತ್ರಿ ಮಾಡಿಕೊಂಡು ನಮ್ಮ ವಿರುದ್ಧ ಹೋರಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಈ ಬಾರಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದು, ಅವರು ಮೋದಿ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಇದೀಗ ಆಡಳಿತ ವಿರೋಧಿ ಅಲೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವುದು ನಿಶ್ಚಿತ. ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದರು.

ಕೇಂದ್ರ ಸರ್ಕಾರ ದೇಶದ ಜನರಿಗೆ ಖಾಲಿ ಚೊಂಬು ಕೊಟ್ಟಿದೆ. ಈ ಕಾರಣಕ್ಕೆ ಬಿಜೆಪಿ ವಿರುದ್ಧ ಖಾಲಿ ಚೊಂಬು ಜಾಹೀರಾತು ನೀಡಿದ್ದೇವೆ. ಕೇಂದ್ರದ ಬಿಜೆಪಿ ಸರ್ಕಾರ ವಿದೇಶದಿಂದ ಕಪ್ಪುಹಣ ತಂದು ದೇಶದ ಜನರಿಗೆ 15 ಲಕ್ಷ ರೂ. ನೀಡಿದ್ದಾರಾ? ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರಾ? ಒಳ್ಳೆಯ ದಿನಗಳು ಬಂದಿದೆಯಾ? ಮೋದಿ ನೀಡಿದ ಯಾವುದೇ ಭರವಸೆಗಳು ಈಡೇರಿಸಿಲ್ಲ. ಈ ದೇಶದ ಜನರಿಗೆ ಅವರು ಖಾಲಿ ಚೊಂಬು ನೀಡಿದ್ದಾರೆ. ಖಾಲಿ ಚೊಂಬು ಜಾಹೀರಾತು ವಿಚಾರವಾಗಿ ಬಿಜೆಪಿ ಏನೇ ಹೇಳಲಿ. ಆದರೆ, ರಾಜ್ಯದ ಖಜಾನೆ ಖಾಲಿಯಾಗಿಲ್ಲ, ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಜತೆಗೆ ಅಭಿವೃದ್ಧಿ ಕಾರ್ಯವನ್ನೂ ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು.

ನೇಹಾ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆರೋಪಿಯನ್ನು ಕೂಡಲೇ ಬಂಧಿಸಿದ್ದೇವೆ, ತನಿಖೆಯನ್ನು ಗಂಭೀರವಾಗಿ ನಡೆಸಿ ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸಲಾಗುವುದು. ಎಲ್ಲ ಕಾಲದಲ್ಲೂ ಹತ್ಯೆಗಳು ನಡೆದಿವೆ, ಹಾಗಂತ ಕಾನೂನು ವ್ಯವಸ್ಥೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಅರ್ಥವಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾಗಿದೆ. ನೇಹಾ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ದುರ್ದೈವ್ಯ. ರಾಜಕೀಯಕ್ಕೆ ಒಬ್ಬರ ಸಾವನ್ನು ಬಳಸುತ್ತಿರುವುದು ಖಂಡನೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net