

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ವೈಜ್ಞಾನಿಕ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಮಾನವ ಪ್ರಾಣಿ ಸಂಘರ್ಷದ ಕುರಿತು ಅರಣ್ಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗೊಂದಿಗೆ ಸಭೆ ನಡೆಸಿದ ಸಿಎಂ ಮಾನವ ಹಾಗೂ ಪ್ರಾಣಿಗಳ ನಡುವೆ ಹೆಚ್ಚಾಗುತ್ತಿರುವ ಸಂಘರ್ಷದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಲ್ಲಿ 11 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದು, ನಿನ್ನೆ ನಾಗರಹೊಳೆ ಅರಣ್ಯ ಪ್ರದೇಶದ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಕೃಷ್ಣ ನಾಯಕ್ ಎಂಬ 10 ವರ್ಷದ ಬಾಲಕನನ್ನು ಹುಲಿ ಎತ್ತೊಯ್ದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಭಾರೀ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿರುವ ಪ್ರಕರಣಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ಸೂಚಿಸಿದರು. ಹಾಸನದಲ್ಲಿ ಆನೆಗಳ ಅರಿವಳಿಕೆ ತಜ್ಞ ವೆಂಕಟೇಶ್ ಅವರು ಆನೆ ತುಳಿತಕ್ಕೆ ಬಲಿ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಗಾಯಾಳು ಆನೆಗೆ ಚಿಕಿತ್ಸೆ ನೀಡುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತೇ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಹಾಸನ ಡಿಎಫ್‌ಒಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಆದೇಶಿಸಿದ್ದಾರೆ.
ಆನೆಗಳು ಜನವಸತಿಗಳತ್ತ ಬರುವುದನ್ನು ತಡೆಯಲು ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಲು ಈ ವರ್ಷ 100 ಕೋಟಿ ರೂ. ಒದಗಿಸಲಾಗಿದೆ. ಇದರಲ್ಲಿ ಹಳೆ ಬಾಕಿ 54 ಕೋಟಿ ರೂ. ಪಾವತಿಸಬೇಕಾಗಿದೆ. ಉಳಿದ ಮೊತ್ತದಲ್ಲಿ ಕೇವಲ 50 ಕಿ.ಮೀ. ತಡೆಗೋಡೆ ನಿರ್ಮಿಸಲು ಸಾಧ್ಯವೆಂದ ಸಚಿವ ಈಶ್ವರ ಖಂಡ್ರೆ, ಹೆಚ್ಚುವರಿ ಅನುದಾನ ಒದಗಿಸಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಳೆ ಬಾಕಿ 54 ಕೋಟಿ ರೂ. ಜೊತೆಗೆ 100 ಕೋಟಿ ರೂ.ಗಳನ್ನು ಈ ವರ್ಷ ವೆಚ್ಚ ಮಾಡುವಂತೆ ಸಚಿವರಿಗೆ ಸೂಚಿಸಿದ್ದಾರೆ.