

ಚೆನ್ನೈ: ಪ್ರಕರಣದ ವಿಚಾರಣೆ ಮುಗಿಸಿ ಕೋರ್ಟ್ನಿಂದ ಹೊರಬರುತ್ತಿದ್ದ ವೇಳೆ ಗುಂಪೊಂದು ರೌಡಿಶೀಟರ್ನನ್ನು ನ್ಯಾಯಾಲಯದ ಮುಂಭಾಗದಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವರೂರು ಜಿಲ್ಲೆಯಲ್ಲಿ ನಡೆದಿದೆ.
ಓನನ್ ಸೆಂಥಿಲ್ ಕೊಲೆಯಾದವರು ಎಂದು ತಿಳಿದು ಬಂದಿದೆ. ಆತನ ಜೊತೆಗಿದ್ದ ವಕೀಲರಾದ ಅಗಿಲನ್ ಹಾಗೂ ಭಾರತಿರಾಜ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನರೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಓನನ್ ಸೆಂಥಿಲ್ ವಿರುದ್ಧ ಕೊಲೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿಗೆ ಜಾಮೀನಿನ ಮೇಲೆ ಈತ ಬಿಡುಗಡೆಯಾಗಿ ಹೊರ ಬಂದಿದ್ದ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ನಡೆದಿದ್ದು, ಆರೋಪಿಗಳು ಮೊದಲೇ ಶಸ್ತ್ರಸಜ್ಜಿತರಾಗಿ ಕೃತ್ಯ ಎಸಗಿದ್ದಾರೆ.
ಆರೋಪಿಗಳು ಸೆಂಥಿಲ್ ಜೊತೆಗಿದ್ದ ವಕೀಲರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಘಟನೆ ನಡೆದ ಪ್ರದೇಶದ ಸುತ್ತ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಹತ್ಯೆ ಹಾಗೂ ಮಾರಣಾಂತಿಕ ಹಲ್ಲೆಯಾಗಿರುವುದನ್ನು ಖಂಡಿಸಿ ಕುಂಭಕೋಣಂನಲ್ಲಿ ವಕೀಲರ ಸಂಘವು ರಸ್ತೆ ತಡೆದು ಪ್ರತಿಭಟನೆ ನಡೆಸಿತ್ತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಾ ನಿರತ ವಕೀಲರು ಆಗ್ರಹಿಸಿದ್ದಾರೆ.