

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 67ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ಜೈಂಟ್ಸ್ ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೂ ಇದು ಟೂರ್ನಿಯಲ್ಲಿ ಕೊನೇ ಲೀಗ್ ಪಂದ್ಯವಾಗಿದ್ದು, ಗೆಲುವಿನೊಂದಿಗೆ ನಿರ್ಗಮಿಸುವ ತವಕದಲ್ಲಿವೆ.
ನಾಯಕತ್ವ ಬದಲಾವಣೆಯೊಂದಿಗೆ ಕಣಕ್ಕಿಳಿದ ಮುಂಬೈ ತಂಡ ಟೂರ್ನಿಯುದ್ದಕ್ಕೂ ಲಯ ಕಂಡುಕೊಳ್ಳಲು ಪರದಾಡಿದ್ದು, ಮೊದಲ ತಂಡವಾಗಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿತ್ತು. ಮತ್ತೊಂದೆಡೆ ಲಖನೌ ಕೂಡ ಬಹುತೇಕ ಟಾಪ್ 4 ರಿಂದ ಔಟ್ ಆಗಿದೆ. ಪ್ರಸಕ್ತ ಋತುವಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ಪಂದ್ಯದಲ್ಲಿ ಲಖನೌ ತಂಡ ಮುಂಬೈ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿತ್ತು.
ಇಂದಿನ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅಥವಾ ಸೋತರೂ ಆರ್ಸಿಬಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ಏಕೆಂದರೆ ಲಖನೌ ಮತ್ತು ಆರ್ಸಿಬಿ ತಲಾ 12 ಅಂಕ ಪಡೆದುಕೊಂಡಿದೆಯಾದರೂ ರನ್ರೇಟ್ನಲ್ಲಿ ಬೆಂಗಳೂರು ತುಂಬಾ ಮುಂದಿದೆ. ಹೀಗಾಗಿ ಫಾಫ್ ಪಡೆಗೆ ಮಹತ್ವದ್ದಲ್ಲ. ಒಂದು ವೇಳೆ ಲಖನೌ ಮುಂಬೈ ವಿರುದ್ಧ 300ಕ್ಕೂ ಹೆಚ್ಚು ರನ್ಗಳ ಅಂತರದಲ್ಲಿ ಜಯಿಸಿದರೆ ಆಗ ಆರ್ಸಿಬಿ ಮತ್ತು ಚೆನ್ನೈ ಪ್ಲೇಆಫ್ನಿಂದ ಹೊರಬೀಳಲಿವೆ. ಆದರೆ, ಇದು ಆಗುವುದು ಕಷ್ಟಸಾಧ್ಯ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಎದುರು ನೋಡುತ್ತಿದೆ. ಒಂದು ವೇಳೆ ಆರ್ಸಿಬಿ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 18 ರನ್ಗಳಿಂದ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಮೊದಲು ಬೌಲಿಂಗ್ ಮಾಡಿದರೆ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ಆರ್ಸಿಬಿ ಪ್ಲೇಆಫ್ ಟಿಕೆಟ್ ಪಡೆಯಲಿದೆ.