

ಬೆಂಗಳೂರು: ಮೇ 18ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಹೈವೋಲ್ಟೇಜ್ ನಾಕೌಟ್ ಪಂದ್ಯ ಶುರುವಾಗುವುದಕ್ಕೂ ಮುನ್ನ ಹಲವು ವಿಚಾರಗಳಿಗೆ ಸದ್ದು ಮಾಡುತ್ತಿದ್ದು, ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಲ್ಲಿದೆ. ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪೈಪೋಟಿಯ ಜೊತೆಗೆ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೂಡ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆಧರೆ, ಪಂದ್ಯ ಶುರುವಾಗುವುದಕ್ಕೂ ಮುನ್ನ ಸಿಎಸ್‌ಕೆ ಮಾಜಿ ನಾಯಕ ಎಂ.ಎಸ್. ಧೋನಿ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.
ಆರ್‌ಸಿಬಿ ವಿರುದ್ಧದ ಪಂದ್ಯಕ್ಕಾಗಿ ಧೋನಿ ಸೇರಿದಂತೆ ಇಡೀ ಸಿಎಸ್‌ಕೆ ತಂಡ ಬೆಂಗಳೂರಿಗೆ ಆಗಮಿಸಿದೆ. ಇದೀಗ ಆರ್‌ಸಿಬಿ ಧೋನಿ ಸ್ವಾಗತದ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸಿಎಸ್‌ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ರೆಸ್ಸಿಂಗ್ ರೂಮ್ಗೆ ಬಂದು ಚಹಾ ಕೇಳುತ್ತಿರುವುದನ್ನು ನೋಡಬಹುದಾಗಿದೆ. ಧೋನಿಯ ಪ್ರೀತಿ ಮತ್ತು ಸರಳತೆಯನ್ನು ನೋಡಿ, ಡ್ರೆಸ್ಸಿಂಗ್ ರೂಮ್ನಲ್ಲಿದ್ದವರು ಮನಸೋತರು. ಆರ್‌ಸಿಬಿ ಸಿಬ್ಬಂದಿ ಅವರಿಗೆ ಒಂದು ಕಪ್ ಚಹಾ ನೀಡಿ ಸತ್ಕರಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಚೆನ್ನೈ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಗೆದ್ದು ಆರ್ಸಬಿ ಪ್ಲೇಆಫ್ ಪ್ರವೇಶಿಸಬೇಕೆಂದು ಪಣ ತೊಟ್ಟಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕೂಡ ಇದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಪಂದ್ಯದ ದಿನ ಕೂಡ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಂಭವನೀಯತೆಯು ಶೇಕಡಾ 47 ರಷ್ಟಿರಲಿದೆ. ರಾತ್ರಿ ವೇಳೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಶೇಕಡಾ 60 ಕ್ಕಿಂತ ಹೆಚ್ಚಿದೆ. ಅಂದರೆ ಆರ್‌ಸಿಬಿ-ಸಿಎಸ್‌ಕೆ ನಡುವಿನ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.