ಹಿಂದಿನ ಬಿಜೆಪಿ ಸರ್ಕಾರದ ಬಿಬಿಎಂಪಿ ವ್ಯಾಪ್ತಿಯ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್!

Siddaramaiah BBMP
Published on

ಬೆಂಗಳೂರು: ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹಿಂದಿನ ಬಿಜೆಪಿ ಸರ್ಕಾರದ ಬಿಬಿಎಂಪಿ ವ್ಯಾಪ್ತಿಯ ಯೋಜನೆಗಳಿಗೆ ಸಿದ್ದರಾಮಯ್ಯ ಅವರು ಬ್ರೇಕ್ ಹಾಕಿದ್ದಾರೆ.

ಯಾವುದೇ ಹೊಸ ಯೋಜನೆಗೆ ಟೆಂಡರ್ ಆಹ್ವಾನಿಸದಂತೆ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ. 4,969 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬವಸರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಎಲ್ಲ ಯೋಜನೆಗಳಿಗೂ ತಡೆ ನೀಡಲಾಗಿದೆ.

ಯಾವುದೇ ಹೊಸ ಟೆಂಡರ್ ನೀಡದಂತೆ ಪಾಲಿಕೆ ಆಯುಕ್ತರಿಗೆ ಸಿದ್ದರಾಮಯ್ಯ ಅವರು ಮೌಖಿಕ ಆದೇಶ ಹೊರಡಿಸಿದ್ದಾರೆ. ನೂತನ ಬೆಂಗಳೂರು ಅಭಿವೃದ್ಧಿ ಸಚಿವ ನೇಮಕವಾದ ಬಳಿಕ ಟೆಂಡರ್ ಆಹ್ವಾನಿಸುವಂತೆ ಸೂಚನೆ ನೀಡಿದ್ದಾರೆ.

ಇದಿಷ್ಟೇ ಅಲ್ಲದೆ, ಮೇ 30ರ ಒಳಗೆ ಹೊಸ ಯೋಜನೆಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಬೊಮ್ಮಾಯಿ ಸರ್ಕಾರ ಈ ಬಾರಿ ಅನುಮೋದಿಸಿದ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಯೋಜನೆಗಳಿಗೂ ಇದೀಗ ಬ್ರೇಕ್ ಬಿದ್ದಂತಾಗಿದೆ. ಆದರೆ, ತುರ್ತು ಕಾಮಗಾರಿ ಮಾತ್ರ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net