More

    ಡಿ.ಕೆ.ಶಿವಕುಮಾರ್ ಪಟ್ಟು, ಸಚಿವ ಸಂಪುಟಕ್ಕೆ ಆಯ್ಕೆ ಕಗ್ಗಂಟು: ತಡರಾತ್ರಿಯಾದರೂ ಮೂಡದ ಒಮ್ಮತ

    ನವದೆಹಲಿ: ರಾಜ್ಯ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲೇ 25 ಮಂದಿಯನ್ನು ಸೇರಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಲೇ ತೀರ್ಮಾನ ಆಗಿತ್ತಾದರೂ ಶುಕ್ರವಾರ ತಡರಾತ್ರಿವರೆಗೆ ಯಾರ್ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇವಲ 8 ಮಂದಿಯ ಹೆಸರನ್ನಷ್ಟೇ ಅಂತಿಮಗೊಳಿಸಲಾಯಿತು.

    ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ರಾತ್ರಿ 2.30ರ ತನಕ ಸಭೆ ನಡೆಸಿದರೂ ಸಿದ್ದರಾಮಯ್ಯರ ಪಟ್ಟಿಗೆ ಶಿವಕುಮಾರ್ ಒಪ್ಪಿಗೆ ಸೂಚಿಸದ ಕಾರಣ ಉಳಿದ 17 ಮಂದಿಯ ಪಟ್ಟಿಯನ್ನು ಮುಂದಿನ ವಾರ ಅಂತಿಮಗೊಳಿಸಲು ತೀರ್ವನಿಸಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬುಧವಾರದ ನಂತರ ಮತ್ತೆ ದೆಹಲಿಗೆ ತೆರಳಿ, ವೇಣುಗೋಪಾಲ್, ಸುರ್ಜೆವಾಲಾ ಮತ್ತು ಖರ್ಗೆ ಅವರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

    ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ಮೊದಲ ಹಂತದಲ್ಲೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಶಿವಕುಮಾರ್ ಪಟ್ಟುಹಿಡಿದಿದ್ದರು. ಆದರೆ, ಸಿದ್ದರಾಮಯ್ಯ ಎರಡು ಹೆಸರಿಗೂ ಒಪ್ಪಿಗೆ ಸೂಚಿಸಲಿಲ್ಲ ಎನ್ನಲಾಗಿದೆ.

    ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರನ್ನಂತೂ ಡಿಕೆಶಿ ಒಪ್ಪಿರಲಿಲ್ಲ. ಆದರೆ, ಜಮೀರ್ ವಿಷಯದಲ್ಲಿ ಸಿದ್ದರಾಮಯ್ಯ ಅಭಿಪ್ರಾಯವೇ ಮೇಲುಗೈ ಸಾಧಿಸಿತು. ಜೆಡಿಎಸ್​ನಿಂದ ಬಂದ ಜಮೀರ್​ರನ್ನು ಮೊದಲ ಹಂತದಲ್ಲಿ ಸಂಪುಟಕ್ಕೆ ಕ್ಯಾಬಿನೆಟ್ ಸಚಿವರಾಗಿ ಸೇರಿಸಿಕೊಂಡು ನಮ್ಮಂತಹ ಹಿರಿಯರಿಗೆ ಅವಮಾನ ಮಾಡಿದ್ದಾರೆ ಎಂದು ಹಿರಿಯ ಶಾಸಕರೊಬ್ಬರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಎನ್.ಎ. ಹ್ಯಾರಿಸ್ ಬೇಡ ಎಂದರೆ ಯು.ಟಿ. ಖಾದರ್ ಅವರನ್ನು ಮೊದಲಿಗೆ ಸೇರಿಸಿಕೊಳ್ಳೋಣ ಎಂದು ಡಿಕೆಶಿ ಸಲಹೆ ನೀಡಿದರೆನ್ನಲಾಗಿದೆ. ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಎಚ್.ಸಿ. ಮಹದೇವಪ್ಪ ಹೆಸರುಗಳಿಗೂ ಡಿಕೆಶಿ ವಿರೋಧಿಸಿದರು ಎಂದು ತಿಳಿದುಬಂದಿದೆ.

    ರಾತ್ರಿ ವಾಪಸ್ ಬಂದ ಸಿದ್ದರಾಮಯ್ಯ: ಮಧ್ಯರಾತ್ರಿ 12 ಗಂಟೆ ವೇಳೆಗೆ ಪಟ್ಟಿಯೊಂದನ್ನು ಅಂತಿಮಗೊಳಿಸಿ ಸಿದ್ದರಾಮಯ್ಯ ತಾವು ಉಳಿದಿದ್ದ ಹೋಟೆಲ್​ಗೆ ವಾಪಸಾಗಿದ್ದರು. ಅದಾದ ಬಳಿಕ ಅಲ್ಲೇ ಕೆ.ಸಿ. ವೇಣುಗೋಪಾಲ್ ಮನೆಯಲ್ಲೇ ಉಳಿದುಕೊಂಡ ಡಿ.ಕೆ. ಶಿವಕುಮಾರ್, ಒಂದೂವರೆ ಗಂಟೆ ಸುರ್ಜೆವಾಲಾ, ವೇಣುಗೋಪಾಲ್ ಜತೆ ಚರ್ಚೆ ಮಾಡಿ, ಸಿದ್ದರಾಮಯ್ಯರ ಆಯ್ಕೆಗಳಿಗೆ ತೀವ್ರ ವಿರೋಧ ಹೊರಹಾಕಿದರು. ಡಿಕೆಶಿ ಪಟ್ಟಿನಿಂದಾಗಿ ಸಿದ್ದರಾಮಯ್ಯರನ್ನು ವಾಪಸ್ ಕರೆಸಿಕೊಳ್ಳದೆ ವಿಧಿಯಿಲ್ಲ ಎಂದು ನಿರ್ಧರಿಸಿದ ವರಿಷ್ಠ ನಾಯಕರು, ನೀವು ಮತ್ತೆ ಮನೆಗೆ ಬನ್ನಿ ಕರೆ ಮಾಡಿದರು. ಅಸಮಾಧಾನದಿಂದಲೇ ಮತ್ತೆ ಕೆ.ಸಿ. ವೇಣುಗೋಪಾಲ್ ಮನೆಗೆ ಸಿದ್ದರಾಮಯ್ಯ ರಾತ್ರಿ 1.40ಕ್ಕೆ ವಾಪಸ್ ಬಂದರು. ಡಿಕೆಶಿ ವಿರೋಧಕ್ಕೆ ಸಿದ್ದರಾಮಯ್ಯ ಅತೃಪ್ತಿ ಹೊರಹಾಕಿದ್ದರಿಂದ ಕೆ.ಸಿ. ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರು ಸಿದ್ದರಾಮಯ್ಯರನ್ನು ಸಮಾಧಾನಪಡಿಸಲು ಮುಂದಾದರು. ಅಂತೂ ಕೊನೆಗೆ ಪಟ್ಟಿ ಬಗ್ಗೆ ಒಮ್ಮತ ಮೂಡದ್ದರಿಂದ 8 ಮಂದಿ ಶಾಸಕರ ಹೆಸರನ್ನಷ್ಟೇ ಅಂತಿಮಗೊಳಿಸಲಾಯಿತು. ಮೊದಲಿಗೆ ಪ್ರಮಾಣವಚನ ಕಾರ್ಯಕ್ರಮ ಮುಗಿಯಲಿ, ನಂತರ ಇಬ್ಬರೂ ದೆಹಲಿಗೆ ಬನ್ನಿ. ಆಗ ಖರ್ಗೆಯವರ ಅಭಿಪ್ರಾಯವನ್ನೂ ಪಡೆದುಕೊಂಡು ಪಟ್ಟಿ ಫೈನಲ್ ಮಾಡೋಣ ಎಂದು ನಾಯಕರು ಮಾತುಕತೆ ನಡೆಸಿದರು. ದೆಹಲಿಗೆ ಒಂದೇ ವಿಮಾನದಲ್ಲಿ ಬಂದಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಗಳೂರಿಗೆ ಪ್ರತ್ಯೇಕವಾಗಿ ತೆರಳಿದರು.

    ಮೂಲ ಕಾಂಗ್ರೆಸ್ಸಿಗರಿಗೆ ಆದ್ಯತೆ: ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚು ಆದ್ಯತೆ ಇರಬೇಕು ಎನ್ನುವುದು ಡಿಕೆ ವಾದವಾಗಿದೆ. ಸ್ಪೀಕರ್ ಹುದ್ದೆಗೆ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ ಹೆಸರು ಕೇಳಿಬಂದಿದ್ದರೂ ಮೂವರೂ ನಮಗೆ ಆ ಹುದ್ದೆ ಬೇಡ ಎಂದಿದ್ದು, ಬದಲಿಗೆ ನಾವು ಬರೀ ಶಾಸಕರಾಗಿ ಮುಂದುವರಿಯುತ್ತೇವೆ ಎಂದು ಬೇಸರ ಹೊರಹಾಕಿದ್ದಾರೆನ್ನಲಾಗಿದೆ.

    ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts