More

    ಉಗ್ರ ಕೃತ್ಯಕ್ಕೆ ಕಡಿವಾಣ; ಇಂದು ಭಯೋತ್ಪಾದನಾ ವಿರೋಧಿ ದಿನ

    ಭಾರತದಲ್ಲಿ ಪ್ರತಿ ವರ್ಷ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. 1991ರಲ್ಲಿ ಇದೇ ದಿನದಂದು ಭಾರತದ ಏಳನೇ ಪ್ರಧಾನಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಎಲ್​ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ) ಭಯೋತ್ಪಾದಕರಿಂದ ಹತ್ಯೆಗೀಡಾದರು. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಯೋತ್ಪಾದನಾ ವಿರೋಧಿ ದಿನ ಆಚರಿಸಲು ಸರ್ಕಾರ ನಿರ್ಧರಿಸಿತು.

    | ಜೆಬಿ

    ವಿಶ್ವದಲ್ಲಿ ಭಯೋತ್ಪಾದನೆಯಿಂದ ಅತಿಹೆಚ್ಚು ತೊಂದರೆಗೆ ಒಳಗಾದ ದೇಶಗಳಲ್ಲಿ ಭಾರತವೂ ಸೇರಿದೆ. ಜಾಗತಿಕ ಭಯೋತ್ಪಾದನೆ ಸೂಚ್ಯಂಕದ ಪ್ರಕಾರ, ಭಯೋತ್ಪಾದನೆಯಿಂದ ಹೆಚ್ಚು ಹಾನಿಗೊಳಗಾದ ದೇಶಗಳ ಪೈಕಿ ಭಾರತವು 7ನೇ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಸಾಕಷ್ಟು ನಿಯಂತ್ರಣದಲ್ಲಿದ್ದರೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ.

    ಭಾರತದ ಅನೇಕ ಪ್ರದೇಶಗಳು ವಿಭಿನ್ನ ರೀತಿಯ ಭಯೋತ್ಪಾದನೆ ಚಟುವಟಿಕೆಗಳಿಗೆ ಸಾಕ್ಷಿಯಾಗಿವೆ. ದೀರ್ಘಾವಧಿಯ ಭಯೋತ್ಪಾದಕ ಚಟುವಟಿಕೆಗಳು ಕಂಡುಬಂದಿರುವ ಪ್ರದೇಶಗಳೆಂದರೆ ಜಮ್ಮು ಮತ್ತು ಕಾಶ್ಮೀರ, ಪೂರ್ವ-ಮಧ್ಯ ಮತ್ತು ದಕ್ಷಿಣ-ಮಧ್ಯ ಭಾರತ ಪ್ರದೇಶ ಮತ್ತು ಈಶಾನ್ಯದಲ್ಲಿನ ಏಳು ರಾಜ್ಯಗಳು. ಇವುಗಳಲ್ಲಿ ಪ್ರಮುಖವಾದುದು ಕಾಶ್ಮೀರದ ಪ್ರತ್ಯೇಕತಾವಾದಿಗಳ ಭಯೋತ್ಪಾದನೆ. ಜಮ್ಮು-ಕಾಶ್ಮೀರವು ಭಯೋತ್ಪಾದನೆಯಿಂದ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ. ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಭಯೋತ್ಪಾದನೆ ತಡೆಗಟ್ಟಲು ಭಾರತದ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಇದರಲ್ಲಿ ವ್ಯಾಪಕ ಯಶಸ್ಸನ್ನು ಕೂಡ ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ, ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸುವಲ್ಲಿ ಅನುಕೂಲವಾಗಿದೆ.

    ಪಂಜಾಬ್​ನಲ್ಲಿ ಸಿಖ್ ಪ್ರತ್ಯೇಕತಾವಾದಿಗಳು ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ನಿರ್ವಣಕ್ಕಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಆ ರಾಜ್ಯದಲ್ಲಿ ಕಂಡುಬಂದಿದ್ದವು. ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಿದ ನಂತರ ಪಂಜಾಬ್​ನಲ್ಲಿ ಶಾಂತಿ ನೆಲೆಸಿದೆ. ಅಸ್ಸಾಂ ಕೂಡ ಪ್ರತ್ಯೇಕತಾವಾದಿ ಗುಂಪುಗಳಿಂದಾಗಿ ಈ ಹಿಂದೆ ಒಂದಿಷ್ಟು ಭಯೋತ್ಪಾದನೆ ಚಟುವಟಿಕೆಗಳಿಗೆ ತುತ್ತಾಗಿತ್ತು. ಈಗ ಅಲ್ಲಿಯೂ ಶಾಂತಿ ನೆಲೆಗೊಂಡಿದೆ. ಇನ್ನು ಮಾವೋವಾದಿ ನಕ್ಸಲಿಯರ ಗುಂಪುಗಳು ಪೊಲೀಸರ ಮೇಲೆ ದಾಳಿ ನಡೆಸುವ ಕೃತ್ಯಗಳು ಆಗಾಗ್ಗೆ ವರದಿಯಾಗುತ್ತಿವೆ. ಹಲವಾರು ರಾಜ್ಯಗಳಲ್ಲಿ ಹರಡಿದ್ದ ಇವರ ಚಟುವಟಿಕೆಗಳು ಈಗ ಜಾರ್ಖಂಡ್, ಛತ್ತೀಸ್​ಗಡ ಸುತ್ತಮುತ್ತಲಿನ ರಾಜ್ಯಗಳಿಗೆ ಸೀಮಿತವಾಗಿದೆ.

    ಭಾರತೀಯ ಸೇನೆ, ಅರೆಸೇನಾ ಪಡೆಗಳು, ಪೊಲೀಸರ ಸತತ ಪರಿಶ್ರಮದ ಫಲವಾಗಿ ಒಟ್ಟಾರೆಯಾಗಿ ಕಳೆದೆರಡು ದಶಕಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಪಾಕಿಸ್ತಾನ ಪ್ರಚೋದಿತ ಕಾಶ್ಮೀರದ ಪ್ರತ್ಯೇಕತವಾದಿ ಭಯೋತ್ಪಾದನೆ ಚಟುವಟಿಕೆಗಳು ಸೇರಿದಂತೆ ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳು ಈ ಅವಧಿಯಲ್ಲಿ ವ್ಯಾಪಕವಾಗಿ ತಗ್ಗಿವೆ. ಈ ಹೋರಾಟದಲ್ಲಿ ಭದ್ರತಾ ಪಡೆಯ ಅನೇಕರು ಹುತಾತ್ಮರಾಗಿದ್ದಾರೆ. ಉಗ್ರ ನಿಗ್ರಹದಲ್ಲಿ ಭದ್ರತಾ ಸಿಬ್ಬಂದಿಯ ತ್ಯಾಗವನ್ನು ಗೌರವಿಸುವುದು ಕೂಡ ಭಯೋತ್ಪಾದನಾ ವಿರೋಧ ದಿನದ ಉದ್ದೇಶಗಳಲ್ಲೊಂದು. ಭಯೋತ್ಪಾದನೆಯು ಇನ್ನೂ ದೇಶದಲ್ಲಿನ ಏಕತೆ ಮತ್ತು ಶಾಂತಿಗೆ ಬೆದರಿಕೆಯಾಗಿದೆ ಎಂಬುದನ್ನು ಕೂಡ ಇದು ನೆನಪಿಸುತ್ತದೆ. ಜನರಲ್ಲಿ ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸಲು ಹಲವಾರು ಸರ್ಕಾರಿ ಮತ್ತು ಸಾಮಾಜಿಕ ಸಂಸ್ಥೆಗಳು ಈ ದಿನದಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭದ್ರತಾ ಪಡೆಗಳಿಗೆ ಹೇಗೆ ಸಹಕಾರ ನೀಡಬೇಕು, ಬೆಂಬಲಿಸಬೇಕು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಈ ದಿನಾಚರಣೆಯದ್ದಾಗಿದೆ. ‘ನಾವು ಭಾರತದ ಜನರು, ನಮ್ಮ ದೇಶದ ಅಹಿಂಸೆ ಮತ್ತು ಸಹಿಷ್ಣುತೆಯ ಸಂಪ್ರದಾಯದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದು, ನಮ್ಮ ಶಕ್ತಿಯಿಂದ, ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ವಿರೋಧಿಸಲು ಈ ಮೂಲಕ ದೃಢೀಕರಿಸುತ್ತೇವೆ. ನಾವು ಶಾಂತಿ, ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯಲು ಮತ್ತು ಉತ್ತೇಜಿಸಲು, ನಮ್ಮ ಎಲ್ಲಾ ದೇಶಬಾಂಧವರನ್ನು ಅರ್ಥ ಮಾಡಿಕೊಂಡು, ಮಾನವ ಜೀವನ ಮತ್ತು ಮೌಲ್ಯಗಳಿಗೆ ಬೆದರಿಕೆ ಹಾಕುವ ಶಕ್ತಿಗಳ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡುತ್ತೇವೆ’ ಎಂಬ ಶಪಥವನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದೆ.

    ಕಟ್ಟುನಿಟ್ಟಿನ ಕಾಯ್ದೆಗಳು

    ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರಮುಖವಾಗಿ ಎರಡು ಕಾಯ್ದೆಗಳು ಅಸ್ತಿತ್ವದಲ್ಲಿವೆ. ಭಯೋತ್ಪಾದನೆ ತಡೆ ಕಾಯ್ದೆ (ಪೊಟಾ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ (ಯುಎಪಿಎ). ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗಳನ್ನು ಬಲಪಡಿಸುವ ಉದ್ದೇಶದಿಂದ ಪೊಟಾವನ್ನು 2002ರ ಮಾರ್ಚ್​ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಪಾಕಿಸ್ತಾನ ಮೂಲದ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ಮಾಡಿದ ನಂತರ ಈ ಹಿಂದಿನ ಭಯೋತ್ಪಾದನಾ ವಿರೋಧಿ ಕಾನೂನಾದ ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ (ಟಾಡಾ) ಬದಲಿಗೆ ಈ ಕಾಯ್ದೆಯನ್ನು ತರಲಾಯಿತು. ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ವಹಿಸಲು ವಿಶೇಷ ಕಾರ್ಯವಿಧಾನಗಳನ್ನು ಯುಎಪಿಎ ಒದಗಿಸುತ್ತದೆ. ಯುಎಪಿಎ ಅಡಿಯಲ್ಲಿ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ ಮತ್ತು ಈ ಕಾಯ್ದೆಯಡಿ ಭಾರತೀಯ ಮಾತ್ರವಲ್ಲದೆ, ವಿದೇಶಿ ಪ್ರಜೆಗಳ ಮೇಲೆಯೂ ಪ್ರಕರಣ ದಾಖಲಿಸಬಹುದಾಗಿದೆ. ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಈ ಕಾಯ್ದೆ ಹೊಂದಿದೆ.

    ಕಾಶ್ಮೀರದಲ್ಲಿ 18 ವರ್ಷಗಳಲ್ಲಿ 5,543 ಉಗ್ರರ ಹತ್ಯೆ

    2004-2022ರ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಬಂಧಿಸಿದ ವಿವರಗಳು ಈ ರೀತಿ ಇವೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತ ಅವಧಿಯಲ್ಲಿ 2004ರಿಂದ 2013ರವರೆಗೆ 9,321 ಭಯೋತ್ಪಾದಕ ದಾಳಿಗಳು ನಡೆದಿವೆ. ಈ ಅವಧಿಯಲ್ಲಿ 4,005 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದು, 878 ಮಂದಿಯನ್ನು ಬಂಧಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಎಂಟೂವರೆ ವರ್ಷಗಳ ಆಡಳಿತ ಅವಧಿಯಲ್ಲಿ 2014 ರಿಂದ ಆಗಸ್ಟ್ 2022ರವರೆಗೆ 2,132 ಭಯೋತ್ಪಾದಕ ಘಟನೆಗಳು ನಡೆದಿವೆ. ಈ ಅವಧಿಯಲ್ಲಿ 1,538 ಉಗ್ರರನ್ನು ಕೊಲ್ಲಲಾಗಿದ್ದು, 1,432 ಜನರನ್ನು ಬಂಧಿಸಲಾಗಿದೆ. ಕಳೆದ 18.5 ವರ್ಷಗಳಲ್ಲಿ ಒಟ್ಟು 11,453 ಭಯೋತ್ಪಾದಕ ದಾಳಿಗಳು ನಡೆದಿದ್ದು, 5,543 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಅಲ್ಲದೆ, 2,310 ಉಗ್ರಗಾಮಿಗಳನ್ನು ಬಂಧಿಸಲಾಗಿದೆ.

    ಹೆಚ್ಚು ಭಯೋತ್ಪಾದನೆ ಬಾಧಿತ ದೇಶಗಳು

    • ಅಫ್ಘಾನಿಸ್ತಾನ
    • ಇರಾಕ್
    • ಸೋಮಾಲಿಯಾ
    • ರ್ಬುನಾ ಫಾಸೊ
    • ಸಿರಿಯಾ
    • ನೈಜೀರಿಯಾ
    • ಮ್ಯಾನ್ಮಾರ್
    • ಪಾಕಿಸ್ತಾನ
    • ಭಾರತ
    • ಈಜಿಪ್ಟ್
    • ಫಿಲಿಪ್ಪಿನ್ಸ್

    ಎನ್​ಐಎ ರಚನೆ

    ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತ ಸರ್ಕಾರವು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಮುಂಬೈ ಮೇಲೆ 26/11 ದಾಳಿಯ ನಂತರ ದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್​ಐಎ) ರಚಿಸಲಾಯಿತು. ಎನ್​ಐಎ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದ್ದು, ರಾಜ್ಯಗಳ ವಿಶೇಷ ಅನುಮತಿಯ ಅಗತ್ಯವಿಲ್ಲದೆ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ತನಿಖೆ ಮಾಡುವ ಅಧಿಕಾರವನ್ನು ಹೊಂದಿದೆ. ಎನ್​ಐಎ ರಚನೆ ನಂತರದಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿರುವುದು ಸುಳ್ಳಲ್ಲ. ಇದಲ್ಲದೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಮತ್ತು ಗುಪ್ತಚರ ಬ್ಯೂರೋ (ಐಬಿ) ಕೂಡ ಉಗ್ರ ನಿಗ್ರಹ ಕಾರ್ಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಪಾತ್ರವನ್ನು ನಿಭಾಯಿಸುತ್ತವೆ.

    ದೇಶದಲ್ಲಿ ನಿಷೇಧಿಸಲಾದ ಪ್ರಮುಖ ಉಗ್ರಗಾಮಿ ಸಂಘಟನೆಗಳು

    • ಲಷ್ಕರ್-ಎ-ತೊಯ್ಬಾ
    • ಜೈಷ್-ಎ-ಮೊಹಮ್ಮದ್
    • ಹರ್ಕತ್-ಉಲ್-ಮುಜಾಹಿದ್ದೀನ್ / ಹರ್ಕತ್-ಉಲ್- ಅನ್ಸಾರ್
    • ಅಲ್ -ಉಜರ್- ಮುಜಾಹಿದ್ದೀನ್
    • ಜಮ್ಮು ಆಂಡ್ ಕಾಶ್ಮೀರ್ ಇಸ್ಲಾಮಿಕ್ ಫ್ರಂಟ್
    • ಸ್ಟುಡೆಂಟ್ ಇಸ್ಲಾಮಿಕ್ ಮೂವ್​ವೆುಂಟ್ ಆಫ್ ಇಂಡಿಯಾ (ಸಿಮಿ)
    • ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್)- ಪೀಪಲ್ಸ್ ವಾರ್
    • ಮಾವೋಯಿಸ್ಟ್ ಕಮ್ಯುನಿಸ್ಟ್ ಸೆಂಟರ್
    • ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್
    • ಖಲಿಸ್ತಾನ ಕಮಾಂಡೊ ಫೋರ್ಸ್
    • ಇಂಟರ್​ನ್ಯಾಷನಲ್ ಸಿಖ್ ಯುತ್ ಫೆಡರೇಶನ್
    • ಯನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ (ಉಲ್ಪಾ)
    • ನ್ಯಾಷನಲ್ ಡೆಮಾಕ್ರಾಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್ (ಎನ್​ಡಿಎಫ್​ಬಿ)
    • ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್​ಟಿಟಿಇ)
    •  ಅಲ್- ಖೈದಾ
    • ತಮಿಳುನಾಡು ಲಿಬರೇಷನ್ ಆರ್ವಿು

    ‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

    ನಿರುದ್ಯೋಗಿಗಳಿಗೆ ಯುವನಿಧಿ: ಆದೇಶ ಮಾಡೇಬಿಟ್ಟ ಸರ್ಕಾರ; ಈ ಗ್ಯಾರಂಟಿಗೆ ಷರತ್ತುಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts