

ಬೆಂಗಳೂರು: ದುಡಿಯುವ ವರ್ಗದ ಜನರ ಕೈಯ್ಯಲ್ಲಿ ಹಣ ಇದ್ದರೆ, ದೇಶದ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಧಿಕಾರ ಮತ್ತು ಸಂಪತ್ತು ಎಲ್ಲರ ಕೈಗೆ ಹಂಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಆದಿಜಾಂಬವರ ಸಾಂಸತಿಕ ಸಮಿತಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿದರು. ಇದೇ ವೇಳೆ ಸಿದ್ದಲಿಂಗಯ್ಯ ಅವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಅವಕಾಶ ವಂಚಿತರಿಗೆ ಸಹಾಯ ಮಾಡಿದರೆ, ಎಲ್ಲರಿಗೂ ಕೊಂಡುಕೊಳ್ಳುವ ಶಕ್ತಿ ಬರುತ್ತದೆ. ಇದು ಆರ್ಥಿಕತೆಗೆ ಸಹಕಾರಿಯಾಗುತ್ತದೆ ಎಂದರು.
ಸಿದ್ದಲಿಂಗಯ್ಯ ಕವನಗಳ ಮೂಲಕ ಅಸಮಾನತೆ, ತಾರತಮ್ಯದ ವಿರುದ್ಧ ಸಮಾಜವನ್ನು ಎಚ್ಚರಿಸುವ ಧ್ವನಿಯಾಗಿ ಕೆಲಸ ಮಾಡಿದರು. ಅಲ್ಲದೆ ಪ್ರಸ್ತುತ ಸಮಾಜದ ವಸ್ತುಸ್ಥಿತಿಯನ್ನು ಅವರ ಹೋರಾಟದ ಕವಿತೆಗಳು ಹೇಳುತ್ತವೆ. ಸಿದ್ದಲಿಂಗಯ್ಯ ಅವರ ಆಶಯಗಳನ್ನು ಬದುಕಿನಲ್ಲಿ ಇಟ್ಟುಕೊಂಡವರಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ಬೆದರಿಕೆ ಪತ್ರ ಬರೆಯುವವರನ್ನು ಬೆಂಬಲಿಸುವವರ ಕೈಗೆ ಅಧಿಕಾರ ಕೊಟ್ಟು ಯಾರಿಗೆ ಬಂತು, ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ. ಶ್ರಮಿಕ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದು ಜನರ ಜೇಬಿಗೆ ಹಣ ಹಾಕುವ ಕೆಲಸವಾಗಿದೆ. ಇದರಿಂದ ರಾಜ್ಯದ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ. ಎಲ್ಲ ವರ್ಗದವರಿಗೂ ಆರ್ಥಿಕ ಶಕ್ತಿ ಬಂದಾಗ ಸಹಜವಾಗಿಯೇ ಸಮಾಜ ಬದಲಾವಣೆಯೆಡೆಗೆ ಸಾಗುತ್ತದೆ ಎಂದು ಹೇಳಿದರು.
ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟು ಸಮಾನತೆ ಬರಬೇಕು ಎಂದರೆ ಸಾಧ್ಯವಿಲ್ಲ. ಜನರು ಶಿಕ್ಷಣದಿಂದ ವಂಚಿತರಾಗುತ್ತಿದ್ದಂತೆ ಸಮಾಜದಲ್ಲಿ ಅಸಮಾನತೆ ಹೆಚ್ಚಾಗುತ್ತಾ ಸಾಗಿತು. ಇದು ಸಿಗಬೇಕಾದ ಹಕ್ಕು ಕೇಳಲೂ ಸಾಧ್ಯವಾಗದಂತಹ ಸ್ಥಿತಿಗೆ ಕೊಂಡೊಯ್ಯಿತು. ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರ್ಥಿಕ ಚೈತನ್ಯ ಸಿಕ್ಕಾಗ ಅಸಮಾನತೆ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ಇಂದು ಪ್ರಬಲ ಶಕ್ತಿಗಳು ಈ ಬದಲಾವಣೆ ವಿರುದ್ಧ ಕೆಲಸ ಮಾಡುತ್ತಿವೆ. ಇದರ ವಿರುದ್ಧ ಎಲ್ಲರೂ ಸಂಟಿತರಾಗಿ ಹೋರಾಡಬೇಕು. ಜಡತ್ವ ಜಾತಿ ವ್ಯವಸ್ಥೆಗೆ ಚಲನೆ ಸಿಕ್ಕಿದರೆ ಶೋಷಿತರಿಗೆ ಶಕ್ತಿ ಬರುತ್ತದೆ ಎಂದರು.