

ದಾವಣಗೆರೆ: ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ನಡೆದ ಅಧಿಕಾರಿಗಳ ಸಭೆ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕಿಡಿಕಾರಿದ ಪ್ರಸಂಗ ನಡೆಯಿತು. ಸಿಎಂ ಕೆಂಗಣ್ಣಿಗೆ ಗುರಿಯಾಗಿದ್ದು ದಾವಣಗೆರೆ ಎಸ್ಪಿ ಡಾ.ಕೆ.ಅರುಣ್.
ಅಧಿಕಾರಿಗಳ ಸಭೆ ಮುಗಿಯುತ್ತಿದ್ದಂತೆ ಹೊರಡಲು ಅಣಿಯಾದ ಎಸ್ಪಿ ಅವರನ್ನು ನೋಡಿ ಸಿಡಿಮಿಡಿಗೊಂಡ ಸಿದ್ದರಾಮಯ್ಯ, 'ಏ ಕುಳಿತ್ಕೋ.. ನಾನೇ ಇನ್ನೂ ಕುಳಿತಿದ್ದೀನಿ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವಿನ್ನೂ ಕುರ್ಚಿಯಲ್ಲಿ ಕುಳಿತೇ ಇದ್ದರೂ ತಮಗಿಂತ ಮೊದಲು ಎಸ್ಪಿ ಎದ್ದಿದ್ದಕ್ಕೆ ಸಿಎಂ ಸಿಟ್ಟಾಗಿದ್ದರು.
'ಏನು ಎಸ್ಪಿನಾ ನೀನು? ಕುಳಿತ್ಕೋ..' ಎಂದ ಸಿದ್ದರಾಮಯ್ಯ ತಾವು ಎದ್ದ ಮೇಲೆ ಎದ್ದು ಹೋಗುವಂತೆ ಎಂದು ತಾಕೀತು ಮಾಡಿದರು. ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ನಡೆಯದಂತೆ ಕ್ರಮವಹಿಸಲು ಸೂಚನೆ ನೀಡಿದ ಅವರು, ಯಾವುದೇ ಕಾರಣಕ್ಕೂ ಅಂಥ ಪ್ರಕರಣ ಜರುಗದಂತೆ ನಿರ್ದೇಶನ ನೀಡಿದರು.