

ಬೆಂಗಳೂರು: ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ” ಎಂದು DCM ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸಭೆ ಕಲಾಪದ ವೇಳೆ ನಡೆದ ಚರ್ಚಾ ಸಮಯದಲ್ಲಿ ಮಾತನಾಡಿದ ಅವರು, “ಜವಾಬ್ದಾರಿಯುತ ದಕ್ಷ ಹಿರಿಯ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳ ಮೇಲೆ ನಮಗೆ ನಂಬಿಕೆಯಿದೆ. ಮುಖ್ಯಮಂತ್ರಿಗಳು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿ ಪ್ರತಿವರ್ಷ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಅವರಿಗೂ ಆ ಕ್ಷೇತ್ರದ ಮೇಲೆ ನಂಬಿಕೆಯಿದೆ. ಸಿಎಲ್ ಪಿ ಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡರು ಹಾಗೂ ಬೇಳೂರು ಗೋಪಾಲಕೃಷ್ಣ ಅವರು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ” ಎಂದರು.
“ಧರ್ಮಸ್ಥಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿದ್ದು ಯಾರಿಗೆ ಯಾವ ರೀತಿ ಬಲಿ ತೆಗೆದುಕೊಳ್ಳಬೇಕೋ, ಯಾವ ಕಾನೂನು ಬಳಸಬೇಕೋ ಅದನ್ನು ಮಾಡಲಾಗುತ್ತದೆ. ಗೃಹಸಚಿವರು ಇದಕ್ಕೆ ಬದ್ದವಾಗಿದ್ದಾರೆ. ಈ ವಿಚಾರದಲ್ಲಿ ಒಂದೆರಡು ದಿನ ಸುಮ್ಮನಿರಿ. ನೀವೆಲ್ಲರೂ ತಾಳ್ಮೆವಹಿಸಿ” ಎಂದು ಪ್ರತಿಪಕ್ಷಗಳಿಗೆ ಆಗ್ರಹಿಸಿದರು.
“ಪ್ರತಿಪಕ್ಷದವರು ಮೊದಲೇ ಎಸ್ ಐಟಿ ರಚನೆ ಬೇಡ ಎಂದು ಹೇಳಬೇಕಿತ್ತು. ಆದರೆ ಹದಿನೈದು ದಿನ ಕಳೆದ ನಂತರ ಹೇಳುತ್ತಾ ಇದ್ದೀರಿ. ಈ ವಿಚಾರದಲ್ಲಿ ಮೊದಲು ನೀವು ಮಾತನಾಡಿಯೇ ಇಲ್ಲ. ದಿನಬೆಳಗಾದರೆ ನಿಮ್ಮ (ಪ್ರತಿಪಕ್ಷಗಳ ನಾಯಕರು) ಮುಖ್ಯಮಂತ್ರಿಗಳ ಮೇಲೆ, ನನ್ನ ಮೇಲೆ ಸೇರಿದಂತೆ ಅನೇಕರ ಮೇಲೆ ಯಾರೋ ಒಬ್ಬ ಆಪಾದನೆ ಮಾಡಿದ್ದಾರೆ. ಇದರಲ್ಲಿ ಷಡ್ಯಂತ್ರ ಇರಬಹುದು. ಇದೆಲ್ಲವೂ ಆಚೆ ಬರಬೇಕು ಅದಕ್ಕಾಗಿ ಗೃಹಸಚಿವರು ಕಾನೂನಿನ ಅಡಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಷಡ್ಯಂತ್ರ ಮಾಡಿದವರು ಯಾರು ಎಂದು ಉಪಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದಾಗ, “ತನಿಖೆ ಮುಗಿದ ನಂತರ ನೂರಕ್ಕೆ ನೂರರಷ್ಟು ಅವರ ಹೆಸರು, ಫೋಟೋ ಎಲ್ಲವೂ ಆಚೆ ಬರುತ್ತದೆ” ಎಂದು ತಿಳಿಸಿದರು.