

PM Modi: ಯುಕ್ರೇನ್ ಯುದ್ಧದ ಕುರಿತು ಅಲಾಸ್ಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಬಗ್ಗೆ ತಮ್ಮ ಮೌಲ್ಯಮಾಪನವನ್ನು ಹಂಚಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ (ಆಗಸ್ಟ್,18) ಪ್ರಧಾನಿ ನರೇಂದ್ರ ಮೋದಿಗೆ ದೂರವಾಣಿ ಕರೆ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರೇ, ನಿಮ್ಮ ಫೋನ್ ಕರೆ ಮತ್ತು ಅಲಾಸ್ಕಾದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ನಿಮ್ಮ ಇತ್ತೀಚಿನ ಸಭೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡಿದೆ ಮತ್ತು ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ನಿರಂತರ ಮಾಹಿತಿ ವಿನಿಮಯಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.
ರಷ್ಯಾದ ಅಧ್ಯಕ್ಷರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ಮೋದಿ ರಾಜತಾಂತ್ರಿಕತೆ ಮತ್ತು ಸಂವಾದದ ಮೂಲಕ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತದ ಸ್ಥಿರ ನಿಲುವನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಬೆಂಬಲಿಸುವ ಭಾರತದ ದೀರ್ಘಕಾಲದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.
ಅಲ್ಲದೆ, ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಉನ್ನತ ಮಟ್ಟದ ಶಾಂತಿ ಮಾತುಕತೆಗಾಗಿ ಆತಿಥ್ಯ ವಹಿಸಲಿರುವ ಸಂದರ್ಭದಲ್ಲಿ ಈ ಸಂಭಾಷಣೆ ನಡೆದಿದೆ.
ಶುಕ್ರವಾರದ ಬಹುನಿರೀಕ್ಷಿತ ಅಲಾಸ್ಕಾ ಪುಟಿನ್ ಅವರೊಂದಿಗಿನ ಶೃಂಗಸಭೆಯಿಂದ ಯಾವುದೇ ನಿರ್ದಿಷ್ಟ ಫಲಿತಾಂಶಗಳ ಕಾಣದಿದ್ದರು. ಉಕ್ರೇನ್ ನಾಯಕ ಪೂರ್ವ ಡಾನ್ಬಾಸ್ ಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡಲು ಒಪ್ಪಿಗೆ ನೀಡಿದರೆ, ಶಾಂತಿ ಮಾತುಕತೆಗಳು ಶೀಘ್ರವಾಗಿ ಮುಂದುವರಿಯಬಹುದು ಎಂದು ಟ್ರಂಪ್ ಸೂಚಿಸಿದರು.(ಏಜೆನ್ಸೀಸ್)