

ಬೆಂಗಳೂರು: ಸದ್ಯ ವಿದೇಶಕ್ಕೆ ಹಾರಿರುವ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ರಾಸಲೀಲೆ ಪ್ರಕರಣದ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲೇ ಇದು ಆ ಪಕ್ಷದ ನಾಯಕರು ಹರಿಬಿಟ್ಟಿದ್ದು, ಈ ಪಕ್ಷದವರಿಂದಲೇ ಹೊರಬಂದಿದ್ದು ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನು ನಿನ್ನೆಯಷ್ಟೇ ಬಿಜೆಪಿ ಮುಖಂಡ ದೇವರಾಜೇಗೌಡ ಸುದ್ದಿಗೋಷ್ಠಿ ನಡೆಸಿ, ಪೆನ್‌ಡ್ರೈವ್ ಹಗರಣದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದರು.
ಈ ಆರೋಪ ವ್ಯಕ್ತವಾಗುತ್ತಿದ್ದಂತೆ ರಾತ್ರೋ ರಾತ್ರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಒಳಗೊಂಡ ಬಿತ್ತಿಪತ್ರಗಳು ಪತ್ತೆಯಾಗಿವೆ. ನಗರದ ಪ್ರಮುಖ ಸ್ಥಳಗಳಲ್ಲಿ ಈ ಫೋಟೋಗಳು ಕಂಡುಬಂದಿದ್ದು, ಅಪರಿಚಿತರು ಉದ್ದೇಶಪೂರ್ವಕವಾಗಿ ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯ ಅಸಭ್ಯ ಹೇಳಿಕೆಯ ಪೋಸ್ಟರ್ಗಳು ದಿಢೀರ್ ಪ್ರತ್ಯಕ್ಷವಾಗಿದ್ದು, ಈ ಕುರಿತು ದೂರು ದಾಖಲಾಗುವ ನಿರೀಕ್ಷೆಯಿದೆ.
ಇನ್ನು ಡಿಕೆ ಶಿವಕುಮಾರ್ ವಿರುದ್ಧ ದೇವರಾಜೇಗೌಡರು ಮಾಡಿದ ಆರೋಪ ಮತ್ತು ಆಡಿಯೋ ರೆಕಾರ್ಡ್ ಬಿಡುಗಡೆಗೊಳಿಸಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಸಿಎಂ, "ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆರೋಪಗಳು ಅಪ್ಪಟ ಸುಳ್ಳು. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಕೈವಾಡವಿದೆ" ಎಂದು ಹೇಳಿದ್ದಾರೆ.