

ಬೆಂಗಳೂರು: ಕೇರಳದ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳ ಕೆಲವು ಊರುಗಳ ಕನ್ನಡ ಹೆಸರುಗಳನ್ನು ಬದಲಿಸುವ ಕೇರಳ ಸರ್ಕಾರದ ಪ್ರಯತ್ನ ಕೆಲವು ದಿನಗಳಿಂದ ಚರ್ಚಾಸ್ಪದವಾಗಿದ್ದು, ಕರ್ನಾಟಕದಲ್ಲಿ ಆ ಬಗ್ಗೆ ವಿರೋಧದ ದನಿ ಕೂಡ ಕೇಳಿಬಂದಿದೆ.
ಆ ನಿಟ್ಟಿನಲ್ಲಿ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಪ್ರವೇಶ ಮಾಡಿದ್ದು, ಊರುಗಳ ಕನ್ನಡ ಹೆಸರುಗಳ ಬದಲಾವಣೆ ಆಗದಂತೆ ತಡೆಯಲು ಮುಂದಾಗಿದ್ದಾರೆ. ಕನ್ನಡದ ಹೆಸರುಗಳ ಬದಲಾವಣೆ ಪ್ರಯತ್ನಕ್ಕೆ ಕರ್ನಾಟಕ-ಕೇರಳ ಗಡಿಭಾಗದ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ಕೆಲವು ಗ್ರಾಮಗಳ ಕನ್ನಡ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ.