ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ ಮಾಸಾಶನ, ಉಚಿತ ಶಿಕ್ಷಣ, ಆರೈಕೆ: ಬಾಲಸೇವಾ ಯೋಜನೆ ಘೋಷಿಸಿದ ಸಿಎಂ

BSY
Published on

ಬೆಂಗಳೂರು: ಕೋವಿಡ್​ನಿಂದ ತಂದೆ-ತಾಯಿ, ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ನೆರವಿಗೆ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಬಾಲಸೇವಾ ಯೋಜನೆಯನ್ನು ರೂಪಿಸಿದ್ದಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿನ ಕರೊನಾ ಸ್ಥಿತಿಗತಿ ಕುರಿತು ನಡೆಸಿದ ಸಭೆ ಬಳಿಕ ಸುದ್ದಿಗೋಷ್ಠಿ ಕರೆದ ಮುಖ್ಯಮಂತ್ರಿ ಯಡಿಯೂರಪ್ಪ, ಸಿಎಂ ಬಾಲಸೇವಾ ಯೋಜನೆ ಕುರಿತ ಮಾಹಿತಿ ನೀಡಿದರು. ಕೋವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಹಲವರಿದ್ದಾರೆ. ರಾಜ್ಯದಲ್ಲಿ ಅಂಥ 13 ಹಾಗೂ ದೇಶದಲ್ಲಿ 577 ಪ್ರಕರಣಗಳು ದಾಖಲಾಗಿವೆ. ಸದ್ಯ ರಾಜ್ಯದ ಆ 13 ಮಕ್ಕಳಿಗೆ ಮುಂದಿನ 21 ವರ್ಷ ಪೂರೈಸುವವರೆಗೂ ಮಾಸಿಕ 3,500 ರೂ. ಲೆಕ್ಕದಲ್ಲಿ ಸಹಾಯಧನ ನೀಡಲಾಗುವುದು. ಇನ್ನು ಈ ಮಕ್ಕಳು ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ನೋಡಿಕೊಳ್ಳಲು ಯಾರೂ ಇರದಿದ್ದರೆ ಸರ್ಕಾರದ ಪಾಲನ ಕೇಂದ್ರದ ಮೂಲಕ ಆರೈಕೆ ಮಾಡಲಾಗುವುದು. ಅಲ್ಲದೆ ಹತ್ತನೇ ತರಗತಿವರೆಗೆ ಮಾದರಿ ವಸತಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಒದಗಿಸಲಾಗುವುದು. ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್ ಮೂಲಕ ಈ ನೆರವು ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಅನಾಥ ಮಕ್ಕಳು ಹತ್ತನೇ ತರಗತಿ ಬಳಿಕ ಉನ್ನತ ಶಿಕ್ಷಣ ಕೈಗೊಳ್ಳಲು ಬ್ಯಾಂಕ್​ ಸಾಲಕ್ಕೆ ಸರ್ಕಾರದಿಂದಲೇ ಬಡ್ಡಿ ತುಂಬಲಾಗುವುದು. 18 ವರ್ಷದ ತನಕ ಆಯುಷ್ಮಾನ್ ಭಾರತ್ ಯೋಜನೆ ಅಡಿ 5 ಲಕ್ಷ ರೂ. ವಿಮೆ ಇರಲಿದ್ದು, ಆ ವಿಮಾ ಕಂತನ್ನು ಸರ್ಕಾರವೇ ಭರಿಸಲಿದೆ. ಹತ್ತನೇ ತರಗತಿ ಬಳಿಕ ಈ ಮಕ್ಕಳಿಗೆ ಉಚಿತವಾಗಿ ಟ್ಯಾಬ್​ ಅಥವಾ ಲ್ಯಾಪ್​​ಟಾಪ್​ ನೀಡಲಾಗುವುದು. ಇನ್ನು ಈ ಮಕ್ಕಳ ಪೈಕಿ ಹೆಣ್ಣುಮಕ್ಕಳಿದ್ದರೆ ಅವರಿಗೆ 21 ವರ್ಷ ತಂಬಿದ ಬಳಿಕ 1 ಲಕ್ಷ ರೂ. ಸಹಾಯಧನ ಕೂಡ ಸಿಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net