

ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ?
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ
ಗಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ...
ಜನಸಾಮಾನ್ಯನೂ ಭಗವಂತನನ್ನು ಕಾಣುವ ಅವಕಾಶ ಇರಬೇಕೆಂಬುದು ಕನಕದಾಸರ ಹಂಬಲ ಮತ್ತು ಎಲ್ಲರನ್ನೂ ಪ್ರೀತಿಸುವ ಕನಕರ ತತ್ತ್ವವೇ ನಮಗೆ ಆದರ್ಶ. 15-16ನೇ ಶತಮಾನದಲ್ಲಿ ಜಾತಿವ್ಯವಸ್ಥೆ ತುಂಬಿ ತುಳುಕುತ್ತಿತ್ತು, ಅದನ್ನು ಹೊಡೆದೋಡಿಸುವ ಛಲ ಇಟ್ಟುಕೊಂಡು ನಾಡಿನಾದ್ಯಂತ ಸಂಚರಿಸಿ ‘ಕುಲ ಕುಲ ಎಂದು ಹೊಡೆದಾಡದಿರಿ...’ ಎಂಬ ಸಂದೇಶ ಸಾರಿದರು.
ಎಲ್ಲ ಪ್ರಾಣಿಗಳಲ್ಲೂ ಭಗವಂತ ಇದ್ದಾನೆಂಬ ತತ್ತ್ವವನ್ನು ಕನಕರು ತೋರಿಸಿಕೊಟ್ಟರು. ವ್ಯಾಸರಾಯರ ಕೂಟದಲ್ಲಿ ಭಗವಂತನನ್ನು ತೋರಿಸುವ ಒಂದು ಪ್ರಸಂಗ ನಡೆಯುತ್ತದೆ. ವ್ಯಾಸರಾಯರ ಕೋರಿಕೆಯಂತೆ ಭಗವಂತನನ್ನು ಕರೆಸುವ ಪ್ರಯತ್ನ ಕನಕರ ಕಡೆಯಿಂದ ನಡೆಯುತ್ತದೆ. ಶ್ವಾನದ ರೂಪದಲ್ಲಿ ಭಗವಂತನನ್ನು ಕರೆಯಿಸುತ್ತಾರೆ. ನಾಯಿ ಬಂದಿದೆ ಎಂದು ಅಲ್ಲಿದ್ದವರು ಹೊಡೆದು ಓಡಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಆಗ ವ್ಯಾಸರಾಯರು ಭಗವಂತ ಎಲ್ಲೆಂದು ಕೇಳುತ್ತಾರೆ, ಆಗ ಕನಕರು, ‘ಗುರುಗಳೇ ನೀವೆಲ್ಲರೂ ಸೇರಿ ಓಡಿಸಿದಿರಿ’ ಎಂದು ಉತ್ತರಿಸುತ್ತಾರೆ. ‘ಮತ್ತೆ ಭಗವಂತನನ್ನು ತೋರಿಸಲ್ಲವೇ?’ಎಂದು ಕೇಳಿದಾಗ, ‘ನಾಳೆ ತೋರಿಸುವೆ’ ಎಂದು ಕನಕದಾಸರು ಭರವಸೆ ಕೊಟ್ಟರಲ್ಲದೆ, ಮರುದಿನ ಶೇಷನ ರೂಪದಲ್ಲಿ ಭಗವಂತ ದರ್ಶನ ಕೊಡುತ್ತಾನೆ.
ಈ ವೇಳೆ ಘಟನೆಯೊಂದು ನಡೆಯುತ್ತದೆ. ‘ನಿನ್ನ ನೋಡಬೇಕೆಂದು ಇಚ್ಛೆ ವ್ಯಕ್ತಪಡಿಸಿ, ಹೊಡೆಸುತ್ತೀಯಲ್ಲ... ಇರಲಿ, ನಿನ್ನ ನೋಡಿಕೊಳ್ಳುತ್ತೇನೆ’ ಎಂದು ಕೃಷ್ಣ ಹಾಸ್ಯ ಮಾಡುವ ಪ್ರಸಂಗ ಬರುತ್ತದೆ. ಮುಂದೆ, ಕನಕದಾಸರು ತಿರುಪತಿಗೆ ಹೋಗುವ ಸಂದರ್ಭ ತಿಮ್ಮಪ್ಪನ ದರ್ಶನ ಆಗುವುದೇ ಇಲ್ಲ. ಪುರೋಹಿತರೊಬ್ಬರಿಗೆ ‘ಕನಕ ಎಂಬ ದಾರ್ಶನಿಕರು ಬರುತ್ತಾರೆ’ ಎಂದು ಕನಸು ಬೀಳುತ್ತದೆ. ಆದರೆ, ಅಲ್ಲಿದ್ದವರು ಯಾರೂ ಕನಕದಾಸರನ್ನು ನೋಡಿರಲಿಲ್ಲ. ಬೆಳಗ್ಗೆಯಿಂದ, ಸಂಜೆವರೆಗೆ ಅವರೆಲ್ಲ ಹುಡುಕುತ್ತಾರೆ. ಸಂಜೆ ಅಂತೂ ಕನಕರ ಪ್ರವೇಶ ಆಗುತ್ತದೆ. ಆ ಅರ್ಚಕರು, ಕನಕದಾಸರನ್ನು, ‘ನೀವು ಕನಕನನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸುತ್ತಾರೆ. ಕನಕರು ಹೌದೆನ್ನುತ್ತಾರೆ. ‘ಎಲ್ಲಿದ್ದಾರೆ?’ ಎಂದು ಮರುಪ್ರಶ್ನೆ ಹಾಕಿದಾಗ, ‘ಮುಂದೆ ಹೋಗುವವರ ಹಿಂದೆ, ಹಿಂದೆ ಬರುವವರ ಮುಂದೆ ಇರುತ್ತಾನೆ ಕನಕದಾಸ’ ಎಂದು ಹೇಳಿ ತಿರುಪತಿ ಬೆಟ್ಟ ಹತ್ತಲು ಆರಂಭಿಸುತ್ತಾರೆ. ಕೊನೆಗೆ ಅಲ್ಲಿದ್ದವರು ಇವರ ಮಾತಿನ ಗೂಡಾರ್ಥ ಅರಿತು, ‘ಇವರೇ ಕನಕದಾಸರು’ ಎಂದು ಅವರನ್ನೇ ಹುಡುಕಿ ಹೋಗುತ್ತಾರೆ, ಇವರು ಬೇಗ-ಬೇಗ ಮುಂದೆ ಸಾಗಿ ಹೋಗುತ್ತಾರೆ.
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೇವಸ್ಥಾನದ ಹಿಂದೆ ಕುಳಿತು ನಾಮಸಂಕೀರ್ತನ ಹಾಡುವ ಸಂದರ್ಭದಲ್ಲಿಯೇ ಅಲ್ಲಿ ತಿಮ್ಮಪ್ಪನು ಪೀತಾಂಬರ ತಂದು ಹೊದೆಸುವುದು, ಹಸಿವಾದಾಗ ಬಂಗಾರದ ಬಟ್ಟಲಲ್ಲಿ ಖೀರು ತಂದುಕೊಡುವ ಪ್ರಸಂಗ ನಡೆಯುತ್ತದೆ. ಗರ್ಭಗುಡಿಯಲ್ಲಿರುವ ಪೀತಾಂಬರ, ಅಲ್ಲಿಯ ಬಂಗಾರದ ಪಾತ್ರೆ ಇಲ್ಲದ್ದನ್ನು ಕಂಡು, ಅದು ಕನಕದಾಸರ ಬಳಿ ಸಿಕ್ಕಾಗ, ಅವರ ಮೇಲೆ ಹಲ್ಲೆಯೂ ನಡೆಯುತ್ತದೆ. ಆಗ ಕೃಷ್ಣನನ್ನು ಉದ್ದೇಶಿಸಿ, ‘ಮುಯ್ಯಿಗೆ ಮುಯ್ಯಿ ತೀರಿಸಿದೆಯೇ ಕೃಷ್ಣ, ಏಟಿಗೆ ಏಟು ಕೊಡುತ್ತಿದ್ದೀಯಾ?’ ಎಂದು ಕನಕದಾಸರು ಹೇಳಿದರು. ‘ಎಲ್ಲರೂ ತಿಮ್ಮಪ್ಪನ ದರ್ಶನ ಮಾಡಲು ಬರುತ್ತಿರುವಾಗ ನೀನು ದರ್ಶನ ಮಾಡದೇ ಕೀರ್ತನೆ ಹಾಡಿಕೊಂಡು ಕುಳಿತಿದ್ದೀಯಲ್ಲ?’ ಎಂದು ಅಲ್ಲಿದ್ದವರು ಪ್ರಶ್ನೆ ಮಾಡಿದಾಗ, ‘ನಾನು ತಿಮ್ಮಪ್ಪನ ದರ್ಶನ ಮಾಡಲು ಬಂದಿಲ್ಲ. ಭಕ್ತರ ಪಾದದ ಧೂಳು ಸ್ವೀಕರಿಸಿ ಪವಿತ್ರನಾಗಲು ಬಂದಿದ್ದೇನೆ’ ಎಂಬ ಕನಕರ ಮಾತು ಮಹತ್ವದ್ದು. ಕೊನೆಗೆ ಅಲ್ಲಿನ ರಾಜರು ಕನಕದಾಸರಿಗೆ ತಿಮ್ಮಪ್ಪನ ದರ್ಶನ ಮಾಡಿಸುತ್ತಾರೆ ಎಂಬುದು ಇತಿಹಾಸದ ಪುಟದಲ್ಲಿದೆ. ಈ ಪ್ರಕಾರ ಕನಕದಾಸರು ಭಕ್ತಿಯಿಂದಲೇ ಭಗವಂತನ ದರ್ಶನ ಮಾಡಬಹುದು ಎಂಬುದನ್ನು ನಾಡಿಗೆ ತೋರಿಸಿಕೊಟ್ಟಿದ್ದಾರೆ.
ಕುರಿಗಾಹಿ ಮಕ್ಕಳಿಗೆ ವಸತಿ ಶಾಲೆ: ಕುರಿಗಾಹಿ ಮಕ್ಕಳಿಗೆ ಶಿಕ್ಷಣ ನೀಡಲು ಯಾವುದೇ ಶುಲ್ಕ ಪಡೆಯುತ್ತಿಲ್ಲ. ಕೇವಲ ಎರಡು ಕುರಿಗಳನ್ನು ಪಡೆದು, ಇದರಿಂದ ಬರುವ ಆದಾಯದಲ್ಲಿ ಮಗುವಿಗೆ 1 ರಿಂದ 10ನೇ ತರಗತಿವರೆಗೂ ಶಿಕ್ಷಣ ನೀಡುತ್ತೇವೆ. ಈಗಾಗಲೇ ಸಾಂಕೇತಿಕವಾಗಿ ಶಿಕಾರಿಪುರದಲ್ಲಿ ಈ ಕಾರ್ಯ ಆರಂಭಿಸಲಾಗಿದೆ. ಮೈಲಾರದಲ್ಲೂ 10 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನಿರ್ವಿುಸುವ ಉದ್ದೇಶ ಹೊಂದಲಾಗಿದೆ.
ಗುರುಪೀಠದ ಶೈಕ್ಷಣಿಕ ಕಾರ್ಯಗಳು: ಧಾರವಾಡ ಜಿಲ್ಲೆಯ ಕಾಗಿನೆಲೆಯಲ್ಲಿ ವಸತಿ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಹಕ್ಕಬುಕ್ಕ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ಬೆಳ್ಳೋಡಿಯಲ್ಲಿ ಎಲ್ಕೆಜಿ ಯಿಂದ 10ನೇ ತರಗತಿವರೆಗೆ ಶಾಲೆ ಪ್ರಾರಂಭಿಸಲಾಗಿದೆ. ಇದೇ ಭಾಗದಲ್ಲಿ ವಿನೂತನ ಪರಿಕಲ್ಪನೆಯಲ್ಲಿ ಚಂದ್ರಗುಪ್ತ ಮೌರ್ಯ ಶಾಲೆ ಆರಂಭಿಸಲಾಗಿದೆ.
ಗಾನನಮನ: ಈ ಕ್ಲಬ್ ಹೌಸ್ ಸಂವಾದ ಕಾರ್ಯಕ್ರಮದಲ್ಲಿ ಕನಕ ದಾಸರ ಕೃತಿಗಳಿಗೆ ಶಾಸ್ತ್ರೀಯ ಸಂಗೀತದ ಸ್ಪರ್ಶ ನೀಡಲಾಯಿತು. ಹಿರಿಯ ಗಾಯಕ ಶಂಕರ ಶಾನುಭೋಗ್ ಎರಡು ಕೀರ್ತನೆಗಳನ್ನು ಹಾಡಿ, ಕಾರ್ಯಕ್ರಮಕ್ಕೆ ಮೆರುಗು ತಂದರೆ, ಅಕ್ಷತಾ ಒಂದು ಮಂಡಿಗೆಯನ್ನು ಪ್ರಸ್ತುತಪಡಿಸಿದರು.
ಮನೆಮನೆಗೂ ಕೀರ್ತನೆ ತಲುಪಿಸಿ: ಕನಕ ಜಯಂತಿ ಆಚರಣೆ ಸಂದರ್ಭದಲ್ಲಿ ಕೆಲವರು ಡಿಜೆ ಬಳಸುತ್ತಿರುವುದು, ಆಡಂಬರ ತೋರುತ್ತಿರುವುದು ಸರಿಯಲ್ಲ. ಬದಲು ಅದೇ ಹಣದಲ್ಲಿ ಕನಕದಾಸರ ಕೀರ್ತನೆ, ತತ್ತ್ವಪದಗಳನ್ನು ಇರುವ ಪುಸ್ತಕಗಳನ್ನು ಕೊಂಡು ಮನೆ-ಮನೆಗೆ ಹಂಚುವ ಮೂಲಕ ಸಾರ್ಥಕ ರೀತಿಯಲ್ಲಿ ಯುವಕರು ಕನಕ ಜಯಂತಿ ಆಚರಿಸಬೇಕು. ಕನಕದಾಸರ ಜೀವನ, ಅವರ ಕೊಡುಗೆ ಬಗ್ಗೆ ಅಧ್ಯಯನ ನಡೆಸಿ, ಆ ಆದರ್ಶಗಳನ್ನು ನಿತ್ಯಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು.
ದೀನದಲಿತರನ್ನು ವಾತ್ಸಲ್ಯದಿಂದ ಕಾಣುವುದು ಮತ್ತು ಸಮಾಜದಲ್ಲಿ ಅನ್ಯೋನ್ಯ ಭಾವನೆ ತಂದು ಸಮುದಾಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಸ್ಥಾಪಿಸಿದ್ದು ಅದರ ಮುಖೇನ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆದುಕೊಂಡುಬಂದಿವೆ. ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿಸುವ ಕೆಲಸ ನಡೆಯುತ್ತಿದೆ. ಜನಸಾಮಾನ್ಯರಿಗೆ ಕನಕರ ತತ್ತ್ವ ತಿಳಿಸುವ ಪ್ರಯತ್ನವನ್ನು ಪ್ರಾಧಿಕಾರ ಮಾಡುತ್ತಿದೆ. 1992ರಲ್ಲಿ ಕನಕ ಗುರುಪೀಠ ಸ್ಥಾಪಿಸಿದ ಶ್ರೀ ಬೀರೇಂದ್ರ ಕೇಶವ ತಾರಾಕಾನಂದ ಪುರಿ 2006ರಲ್ಲಿ ದೈವಾಧೀನರಾದರು. ನಂತರ ನಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ನಂತರ ಶೈಕ್ಷಣಿಕ, ರಾಜಕೀಯಜ್ಞಾನ ಮೂಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಹಳ್ಳಿಗಳಲ್ಲಿ ಜಾತಿಸಂಘರ್ಷ, ವೈಷಮ್ಯ ಕಾಣುತ್ತೇವೆ. ಅಂತಹ ಸಂದರ್ಭದಲ್ಲಿ ನಾವು ಹಿಂದುಳಿದ, ದಲಿತ ಸಮುದಾಯದ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಎಲ್ಲರನ್ನೂ ಸೇರಿಸಿ ಸಾಮರಸ್ಯ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಎಲ್ಲರೂ ಒಂದೇ, ಒಟ್ಟಾಗಿ ಬಾಳಬೇಕೆಂದು ತಿಳಿಸಿ ಅಸಮಾನತೆಯ ಮನೋಭಾವನೆ ದೂರ ಮಾಡಲು ಒಕ್ಕೂಟ ಕೆಲಸ ಮಾಡುತ್ತಿದೆ.
ಕನಕದಾಸರ ಹೆಜ್ಜೆಗುರುತು ಹಲವೆಡೆ ಇದೆ. ಅಲ್ಲಿ ಮಠದ ವತಿಯಿಂದ ಶಾಶ್ವತ ಕಾರ್ಯಕ್ರಮ ರೂಪಿಸುತ್ತಿದ್ದೀರಾ?
-ಶಾಶ್ವತ ಕಾರ್ಯಕ್ರಮ ಎನ್ನುವುದಕ್ಕಿಂತ ಕನಕದಾಸರ ಆರಾಧ್ಯದೈವ ತಿಮ್ಮಪ್ಪ ಮತ್ತು ಉಡುಪಿ ಕೃಷ್ಣ ಇರುವೆಡೆ ಪೀಠ ಸ್ಥಾಪಿಸುವ ಉದ್ದೇಶವಿದೆ. ತಿರುಪತಿ ಹಾಗೂ ಉಡುಪಿಯಲ್ಲಿ ಜಾಗ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ವ್ಯಾವಹಾರಿಕವಾಗಿ ಆಗಿ ಬರಲಿಲ್ಲ. ಅಲ್ಲಿ ಕನಕರ ಪ್ರಭೆ ನಿರಂತರವಾಗಿರಲು ಧಾರ್ವಿುಕ ಸಂಸ್ಕಾರ ಕೊಡಲು ಆಲೋಚಿಸುತ್ತಿದ್ದೇವೆ.
ಕಾಗಿನೆಲೆ ಅಭಿವೃದ್ಧಿ, ಕಾಗಿನೆಲೆ ಕನಕದಾಸರ ದೇವಾಲಯ, ಮಠದ ಕಾರ್ಯಚಟುವಟಿಕೆ ಬಗ್ಗೆ ವಿವರಣೆ ನೀಡಬಹುದೇ? ಕಾರ್ಯಚಟುವಟಿಕೆಯನ್ನು ಬೇರೆ ಆಯಾಮದಲ್ಲಿ ವಿಸ್ತರಿಸುವ ಆಲೋಚನೆ ಇದೆಯೇ?
-ಕನಕ ಗುರುಪೀಠದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕಾಗಿನೆಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿಸುವ ಉದ್ದೇಶದಿಂದ ಪ್ರಾಧಿಕಾರ ರಚನೆ ಮಾಡಲಾಗಿದೆ. ಈಗಾಗಲೇ ಕನಕ ಐಕ್ಯ ಸಮಾಧಿ ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ. ಚೆನ್ನಕೇಶವ, ಆದಿಕೇಶವ ದೇವಳ ಆಗಿದೆ, ತಿಮ್ಮಕೇಶವನ ದೇವಸ್ಥಾನ ಅನಾವರಣ ಬಾಕಿ ಇದೆ. ಜೀಣೋದ್ಧಾರ ಕಾರ್ಯವೂ ನಡೆದಿದೆ. ಕನಕನ ಮಂದಿರವನ್ನು ಪ್ರಾಧಿಕಾರದಿಂದ ನಿರ್ವಿುಸಲಾಗಿದೆ. ಮೂರು ಸಾವಿರ ಜನರು ಕುಳಿತು ಕಾರ್ಯಕ್ರಮ ನೋಡುವ ಕನಕ ಸಭಾಂಗಣ ಆಗುತ್ತಿದೆ. ಹರಿಭಕ್ತಿಸಾರವನ್ನು ಕಟ್ಟಡದಲ್ಲಿ ಬಿಂಬಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ.
ಕನಕದಾಸರ ಎಷ್ಟೋ ಕೀರ್ತನೆಗಳು ಇನ್ನೂ ಸಮಾಜಕ್ಕೆ ಗೊತ್ತಾಗಬೇಕಿದೆ, ಕನಕ ಸಂಶೋಧನಾ ಕೇಂದ್ರದ ಕಡೆಯಿಂದ ಈ ಕೆಲಸ ಆಗುತ್ತಿದೆಯೇ?
-ಕನಕರ ಕೀರ್ತನೆಗಳ ಮೇಲೆ ದಬ್ಬಾಳಿಕೆ ನಡೆದುಕೊಂಡು ಬಂದಿದೆ, ಇದನ್ನು ಖಂಡಿಸುತ್ತೇನೆ. ಕೃತಿಚೌರ್ಯದ ಹಲವು ಘಟನೆಗಳು ನಡೆದಿವೆ. ಈ ನಡುವೆ ಅನೇಕ ಕೀರ್ತನೆಗಳನ್ನು ಕಾಗಿನೆಲೆ ಪ್ರಾಧಿಕಾರ ಬೆಳಕಿಗೆ ತರುವ ಕೆಲಸ ಮಾಡಿದೆ. ಪ್ರಾಧಿಕಾರದಿಂದ ಮುದ್ರಣವನ್ನೂ ಮಾಡಿಸಿದ್ದೇವೆ.
ಕನಕರ ಕೃತಿಚೌರ್ಯ ಮಾಡಿದವರ ಮೇಲೆ ಪೀಠದ ಕಡೆಯಿಂದ ಪ್ರಕರಣ ದಾಖಲು ಮಾಡುವ ಯೋಚನೆ ಮಾಡಬಹುದೇ?
- ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಭಾಗದ ಸ್ವಾಮೀಜಿಯೊಬ್ಬರು ಕೃತಿಚೌರ್ಯ ಮಾಡಿ ಪುಸ್ತಕ ಪ್ರಕಟಿಸಿದ್ದರು. ನಾವು ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಮನವಿ ಮಾಡಿದ್ದೆವು. ಸರ್ಕಾರ ಸರಿಯಾದ ಕ್ರಮಕೈಗೊಳ್ಳದ್ದರಿಂದ ಧರಣಿಯನ್ನೂ ನಡೆಸಲಾಯಿತು.
ಕನಕದಾಸರ ಕೀರ್ತನೆಗಳನ್ನು ಬೇರೆ ಭಾಷೆಗೆ ತರ್ಜುಮೆ ಮಾಡುವ ಕೆಲಸ ನಡೆಯುತ್ತಿದೆಯೇ?
-ಹಿಂದಿ, ತಮಿಳು, ಇಂಗ್ಲಿಷ್, ಮರಾಠಿಯಲ್ಲಿ ಈಗಾಗಲೇ ಕೀರ್ತನೆಗಳು ಮುದ್ರಣ ಆಗಿವೆ.
ಎಸ್ಟಿ ಮೀಸಲು ಪ್ರಯತ್ನ ಎಲ್ಲಿಗೆ ಬಂತು?
‘ಎಸ್ಟಿ ಮೀಸಲು ಕುಲಶಾಸ್ತ್ರೀಯ ಅಧ್ಯಯನ ವರದಿ ಬಂದ ಮೇಲೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಮುಖ್ಯಮಂತ್ರಿಗಳು ನಮಗೆ ವಚನ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ರೂಪುರೇಷೆ ನಡೆಯುತ್ತಿದೆ.