ಶಾಸಕರ ದುಮ್ಮಾನ ಶಮನ; ಬೇಡಿಕೆಗಳಿಗೆ ಸ್ಪಂದಿಸುವ ಖಾತ್ರಿ

siddu dk
Published on

ಬೆಂಗಳೂರು: ಕೆಲ ಸಚಿವರ ನಡವಳಿಕೆ, ಅನುದಾನ ನಿರಾಕರಣೆ, ವರ್ಗಾವಣೆ ಬೇಡಿಕೆಗಳಿಗೆ ಅಸಮ್ಮತಿ ಸೇರಿ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಶಾಸಕರ ಅಸಮಾಧಾನ ಸ್ಪೋಟಗೊಳ್ಳಲಿದೆ ಎಂದೇ ನಿರೀಕ್ಷಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್​ಪಿ) ಸೌಹಾರ್ದಯುತವಾಗಿ ಮುಗಿದಿದೆ. ಅತೃಪ್ತ ಶಾಸಕರ ದನಿ ಸಿಎಲ್​ಪಿ ಸಭೆಯಲ್ಲಿ ಕ್ಷೀಣಿಸಿದೆ.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮ್ಯಾರಥಾನ್ ಸಭೆಯ ಆರಂಭದಲ್ಲಿ ಸಭೆಯ ಔಚಿತ್ಯದ ಬಗ್ಗೆ ಸಿಎಂ ವಿವರಿಸಿದರು. ಜತೆಗೆ ಶಾಸಕರು ವಿಷಯ ಎತ್ತುವ ಮೊದಲೇ ಸಿಎಂ ಪರಿಹಾರ ಸೂತ್ರವನ್ನು ಮುಂದಿಟ್ಟರು. ಶಾಸಕರಲ್ಲಿ ಬೇಸರ ಹೆಪ್ಪುಗಟ್ಟುವುದನ್ನು ತಡೆಯುವ ಉದ್ದೇಶದಿಂದ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸುವ ಖಾತ್ರಿಯನ್ನು ಸಿಎಂ ನೀಡಿದರು.

ಗ್ಯಾರಂಟಿ ಕಾರಣಕ್ಕೆ ಕೇಳಿದಷ್ಟು ಅನುದಾನ ಕೊಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಹೊಂದಿಸಿಕೊಡುತ್ತೇನೆ. ಬಜೆಟ್ ತಯಾರಿ, ಅಧಿವೇಶನ ಸೇರಿ ವಿವಿಧ ಕಾರಣದಿಂದ ವರ್ಗಾವಣೆಗಳಿಗೆ ತಡೆಯಾಗಿತ್ತು, ಇದನ್ನು ಬೇಡಿಕೆ ಆಧಾರದ ಮೇಲೆ ಈಡೇರಿಸುವೆ ಎಂದು ಶಾಸಕರಿಗೆ ಭರವಸೆ ನೀಡಿದರು. ಸಿಎಂ, ಪ್ರತಿ ತಿಂಗಳು ಜಿಲ್ಲಾವಾರು ಉಸ್ತುವಾರಿ ಸಚಿವ, ಶಾಸಕರ ಸಭೆಗೆ ನಡೆಸುವುದಾಗಿ ಸಭೆಯಲ್ಲಿ ಪ್ರಕಟಿಸಿದರು.

ಶಾಸಕರು ಹೇಳಿದ್ದೇನು?: ಅನುದಾನ ಕೊಡದಿದ್ದರೆ ಜನರ ನಿರೀಕ್ಷೆ ಈಡೇರಿಸುವುದು ಕಷ್ಟವಾಗಲಿದೆ. ಮುಂದೆ ಚುನಾವಣೆ ಕೂಡ ಬರಲಿದೆ. ಆದ್ಯತೆ ಮೇಲೆ ಅನುದಾನ ಹಂಚಿಕೆ ಒದಗಿಸಿ ಎಂದು ಶಾಸಕರು ಒತ್ತಾಯಿಸಿದರು. ವರ್ಗಾವಣೆ ವಿಚಾರದಲ್ಲಿ ನಾವು ಸಚಿವರಿಗೆ ಮನವಿ ಕೊಟ್ಟಿದ್ದೆವು. ಕೆಲವರು ಪುರಸ್ಕರಿಸಿಲ್ಲ. ಇನ್ನು ಕೆಲವರು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಶಿಫಾರಸು ಹೊರತಾಗಿಯೂ ವರ್ಗಾವಣೆ ನಡೆದಿವೆ. ಹಾಗಿದ್ದರೆ ನಮ್ಮ ಪತ್ರಕ್ಕೆ ಕಿಮ್ಮತ್ತೇನು? ಎಂದು ಪ್ರಶ್ನಿಸಿದಾಗ ಸಭೆಯಲ್ಲಿದ್ದ ಹಲವರು ದನಿಗೂಡಿಸಿದರು.

ಪತ್ರ ಬರೆದ ಬಹುತೇಕ ಶಾಸಕರು ಸಭೆಗೆ ಹಾಜರಾಗಿದ್ದು, ಎಲ್ಲರ ನೇತೃತ್ವವನ್ನು ಬಸವರಾಜ ರಾಯರಡ್ಡಿ ವಹಿಸಿಕೊಂಡಿದ್ದರು. ಇನ್ನು, ಅಸಮಾಧಾನಿತ ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಸಭೆಗೆ ಹಾಜರಾಗಿ, ಶಾಸಕರೊಂದಿಗೆ ಆಸೀನರಾಗಿದ್ದರು.

ಸಭೆಯಲ್ಲಿ ಪತ್ರದ ಕಾವು

ವರ್ಗಾವಣೆ, ಅನುದಾನದ ವಿಷಯದಲ್ಲಿ ಶಾಸಕರ ಸಹಿ ಸಂಗ್ರಹ ಮಾಡಿದ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ನಮ್ಮಿಂದ ಪತ್ರ ಬಂದಿದೆ ಅಂತ ಗೊಂದಲ ಶುರುವಾಗಿದೆ. ನಾವು ಪತ್ರಕ್ಕೆ ಸಹಿ ಹಾಕಿರುವುದು ನಿಜ. ನಿಮ್ಮ ಗಮನ ಸೆಳೆಯಲು ನಾವು ಪತ್ರ ಬರೆದಿದ್ದು. ಆದರೆ ಪತ್ರದಲ್ಲಿದ್ದ ಅಂಶವೇ ಬೇರೆ. ಅದು ಇಷ್ಟು ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹಿರಿಯ ಶಾಸಕರು ಸಿಎಂ ಉದ್ದೇಶಿಸಿ ಹೇಳಿದರು. ಅಲ್ಲದೇ, ನಮಗೆ ಎಲ್ಲೂ ಅಸಮಾಧಾನವಿಲ್ಲ. ಕೆಲ ಸಣ್ಣಪುಟ್ಟ ಸಮಸ್ಯೆಗಳು ಇವೆ. ನಾವು ಎಲ್ಲವೂ ಇಲ್ಲವೆಂದು ಹೇಳುತ್ತಿಲ್ಲ. ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಬೇರೆ ಉದ್ದೇಶ ಇಟ್ಟುಕೊಂಡು ಪತ್ರ ಬರೆದಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮದು ಪಕ್ಷ, ಸರ್ಕಾರ ವಿರೋಧಿ ನಡೆಯೂ ಅಲ್ಲ. ಇದನ್ನು ದಯವಿಟ್ಟು ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಹಿರಿಯ ಶಾಸಕರು ಸಮರ್ಥಿಸಿಕೊಂಡರು.

 ಶಾಸಕರಿಗೆ ಟಾರ್ಗೆಟ್

ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದು, ಗ್ಯಾರಂಟಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯಕ್ರಮ ರೂಪಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಶಾಸಕರಿಗೆ ಸೂಚಿಸಿದರು.

 ಶಾಸಕರಿಗೆ ಸಿಎಂ ಸಲಹೆಗಳು

  • · ಆಡಳಿತಾತ್ಮಕ ಒತ್ತಡಗಳ ನಡುವೆಯೂ ನಾನು ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುತ್ತೇನೆ. ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ರ್ಚಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ರ್ಚಚಿಸಿ.
  • · ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ತಮ್ಮ ಸುಳ್ಳಿನ ಪರಿವಾರದ ಮೂಲಕ ಹಬ್ಬಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ.
  • · ಹೊಸ ಸರ್ಕಾರ ಬಂದ ಬಳಿಕ ನಮ್ಮ ಎದುರಿಗೆ ತಕ್ಷಣಕ್ಕೆ ರಾಜ್ಯದ ಆರ್ಥಿಕತೆಯನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇತ್ತು. ಜತೆಗೆ ಆಯವ್ಯಯ ರೂಪಿಸುವ ಹೊಣೆಗಾರಿಕೆಯೂ ಇತ್ತು. ಇದನ್ನು ಅರ್ಥಮಾಡಿಕೊಳ್ಳಬೇಕು.
  • · ಐದು ಗ್ಯಾರಂಟಿ ಜಾರಿ ಮಾಡಲು 58 ಸಾವಿರ ಕೋಟಿ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ಹೀಗಾಗಿ ನಾನೇ ಸ್ವತಃ ಬಜೆಟ್ ಸಿದ್ಧತೆಗೆ ಕೂರುವುದು ಅನಿವಾರ್ಯವಾಗಿತ್ತು. ಈ ಕಾರಣಗಳಿಂದ ನಾನು ಇತರೆ ಸಂಗತಿಗಳ ಕಡೆಗೆ ಗಮನ ಕೊಡಲು ಸಾಧ್ಯ ಆಗಲಿಲ್ಲ.
  • · ಅಧಿವೇಶನದ ನಡುವೆ ರಾಷ್ಟ್ರಮಟ್ಟದ ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿದೆವು. ಈ ಸಭೆ ಮುಗಿಯುತ್ತಿದ್ದಂತೆ ಶಾಸಕರು ಮತ್ತು ಸಚಿವರ ಜತೆ ಸಭೆ ನಡೆಸಲು ವರಿಷ್ಠರು ತೀರ್ವನಿಸಿದ್ದರು. ಈ ಎರಡೂ ಕಾರಣಗಳಿಂದ ಶಾಸಕಾಂಗ ಸಭೆ ಕರೆಯುವುದು ತಡವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net