ನಗರದಲ್ಲಿ ಇನ್ನೊಬ್ಬ ವಿದ್ಯಾರ್ಥಿನಿಯ ದುರಂತ ಅಂತ್ಯ; ಶಾಲೆಯಲ್ಲಿ ಕಿರುಕುಳ ಆರೋಪ!

robbery, investigation, delay,
Published on

ಬೆಂಗಳೂರು: ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಆಕೆಯ ಶಿಕ್ಷಕರ ಕಿರುಕುಳವೇ ಕಾರಣ ಎನ್ನಲಾಗಿದೆ. ಈ ಮೂಲಕ ಶಿಕ್ಷಣ ಸಂಸ್ಥೆಯವರಿಂದಲೇ ನಡೆದ ಕಿರುಕುಳಕ್ಕೆ ರಾಜಧಾನಿಯಲ್ಲಿ ಮತ್ತೊಂದು ದುರಂತ ಅಂತ್ಯ ಸಂಭವಿಸಿದಂತಾಗಿದೆ.

ಬೆಂಗಳೂರಿನ ಕುಂಬಳಗೋಡು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ ಏಳನೇ ತರಗತಿಯ ಸಮೀಕ್ಷಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕೆಂಗೇರಿ ಬಳಿ ಗುರುವಾರ ಈ ಪ್ರಕರಣ ನಡೆದಿದ್ದು, ಈ ಸಂಬಂಧ ವಿದ್ಯಾರ್ಥಿನಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಈಕೆ ಒಂದು ತಿಂಗಳಿಂದ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಳು. ಈ ಕುರಿತು ಸ್ನೇಹಿತರ ಬಳಿ ಕೇಳಿದಾಗ ಶಾಲೆಯಲ್ಲಿ ಅವಳಿಗೆ ವಿನಾಕಾರಣ ಬೈದು, ಶಿಕ್ಷಿಸಿ ಕಿರುಕುಳ ನೀಡುತ್ತಿದ್ದರು ಎಂಬುದು ಗೊತ್ತಾಯಿತು ಎಂದು ಸಮೀಕ್ಷಾ ಸಂಬಂಧಿ ತಿಳಿಸಿದ್ದಾರೆ. ಅಲ್ಲದೆ ತಾಯಿ ಈ ಬಗ್ಗೆ ಶಾಲೆಯವರಲ್ಲಿ ವಿಚಾರಿಸುತ್ತೇನೆ ಎಂದಾಗ ಆಕೆ ಬೇಡ ಎಂದು ಕೈಮುಗಿದು ಕೇಳಿಕೊಂಡಿದ್ದಳು ಮತ್ತು ಕೇಳಿದರೆ ಕಿರುಕುಳ ಜಾಸ್ತಿ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಳು ಎಂದೂ ಅವರು ಹೇಳಿದ್ದಾರೆ.

ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜುಲೈ 17ರಂದು ಕಾಲೇಜು ವಿದ್ಯಾರ್ಥಿ ಆದಿತ್ಯ ಪ್ರಭು ಎಂಬಾತ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿಗೂ ಶಿಕ್ಷಣ ಸಂಸ್ಥೆಯವರ ಕಿರುಕುಳವೇ ಕಾರಣ ಎಂದು ಆತನ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಾದ ಬೆನ್ನಿಗೇ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net