

ನವದೆಹಲಿ: ಪ್ರೈಮರಿ ತರಗತಿಯಲ್ಲಿದ್ದಾಗ ವಿದ್ಯಾರ್ಥಿಗಳು ಸೇರಿಕೊಂಡಿ ಕೀಟಲೆ ಮಾಡುವುದು ಸಹಜ! ಕೆಲವೊಂದು ಬಾರಿ ಎಷ್ಟೇ ಬುದ್ದಿವಾದ ಹೇಳಿದರೂ ಪ್ರಯೋಜನವಿಲ್ಲ ಎಂಬಂತಾಗಿಬಿಡುತ್ತದೆ. ಆದರೂ ಕಾಳಜಿ ಅಗತ್ಯ. ಸಣ್ಣ ಪ್ರಾಯದಲ್ಲಿ ಮಕ್ಕಳೆಲ್ಲಾ ಒಟ್ಟಾಗಿ ಏನು ಅವಾಂತರ ಮಾಡಿಕೊಳ್ಳುತ್ತಾರೋ ಹೇಳಲು ಸಾಧ್ಯವಿಲ್ಲ. ಇದೀಗ ಇಂತಹದ್ದೇ ಅವಾಂತರವೊಂದು ವರದಿಯಾಗಿದೆ.
ದಕ್ಷಿಣ ದೆಹಲಿಯ ಕಿದ್ವಾಯಿ ನಗರದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಸೇರಿಕೊಂಡು ಸಹಪಾಠಿಯ ಜೀವಕ್ಕೇ ಆಪತ್ತು ತಂದೊಡ್ಡುವಂತಹ ಕೆಲಸ ಮಾಡಿದ್ದಾರೆ. ತರಗತಿಯ ವಿದ್ಯಾರ್ಥಿಗಳು ಸೇರಿಕೊಂಡು ಸಹಪಾಠಿಯ ಖಾಸಗಿ ಅಂಗಕ್ಕೆ ನೈಲಾನ್ ದಾರ ಬಿಗಿದಿದ್ದಾರೆ.
ಸಹಪಾಠಿಗಳು ಮಾಡಿದ ಈ ಕೃತ್ಯದ ಗಂಭೀರತೆ 8 ವರ್ಷದ ವಿದ್ಯಾರ್ಥಿಗೆ ಅರಿವಾಗಿಲ್ಲ. ಮನೆಯಲ್ಲಿ ಪೋಷಕರು ಸ್ನಾನ ಮಾಡಿಸುವ ವೇಳೆ ಮಗುವಿನ ಖಾಸಗಿ ಅಂಗದಲ್ಲಿ ಬಿಗಿಯಾಗಿ ನೈಲಾನ್ ದಾರ ಕಟ್ಟಿರುವುದು ಅರಿವಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಪೋಷಕರು ದಾರವನ್ನು ಕತ್ತರಿಸಿದ್ದಾರೆ. ನಂತರ ಮಗುವನ್ನು ವಿಚಾರಿಸಿ ಘಟನೆಯ ಬಗ್ಗೆ ತಿಳಿದುಕೊಂಡಿದ್ದಾರೆ.
ಪೋಷಕರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗುವಿನ ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿರುವುದು ವರದಿಯಾಗಿದೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಮಗುವಿನೊಂದಿಗೆ ಶಾಲೆಗೆ ತೆರಳಿ ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಪತ್ತೆ ಮಾಡುತ್ತೇವೆ ಎಂದು ಉಪ ಪೊಲೀಸ್ ಆಯುಕ್ತ ಚಂದನ್ ಚೌಧರಿ ಹೇಳಿದ್ದಾರೆ. (ಏಜೆನ್ಸೀಸ್)