ಫೇಸ್​​ಬುಕ್​ನಲ್ಲಿ ಪರಿಚಯವಾದ ಯುವತಿಯಿಂದ ಪೇಚಿಗೆ ಸಿಲುಕಿದ ಪಾದ್ರಿ; ಮೂವರ ವಿರುದ್ಧ ಎಫ್​ಐಆರ್​

Cyber Crime 24 Sept 2020
Published on

ಬರೇಲಿ: ತನ್ನನ್ನು ತಾನು ಬ್ರಿಟನ್​ನವಳು ಎಂದು ಪರಿಚಯಿಸಿಕೊಂಡ ಯುವತಿಯನ್ನು ನಂಬಿದ ಕೇರಳದ ಕ್ರಿಶ್ಚಿಯನ್ ಪಾದ್ರಿಗೆ ಬಹುದೊಡ್ಡ ಶಾಕ್​ ಎದುರಾಗಿದೆ.

ಈ ಪಾದ್ರಿಗೆ ಆಗಸ್ಟ್​ 28ರಂದು ಯುವತಿಯೋರ್ವಳ ಹೆಸರಿನಿಂದ ಫೇಸ್​​ಬುಕ್​​ನಲ್ಲಿ ಫ್ರೆಂಡ್ ರಿಕ್ವೆಸ್ಟ್​ ಬಂತು. ಪ್ರೊಫೈಲ್​ ನೋಡಿದರೆ ಬ್ರಿಟಿಷ್​ ಪ್ರಜೆ ಎಂದಿತ್ತು. ಇಬ್ಬರೂ ಫೇಸ್​ಬುಕ್​​ನಲ್ಲಿ ಫ್ರೆಂಡ್​ ಆಗಿದ್ದಷ್ಟೇ ಅಲ್ಲದೆ ಮೆಸೆಂಜರ್​​ನಲ್ಲಿ ಚಾಟ್ ಕೂಡ ಶುರುವಾಗಿತ್ತು. ಹಾಗೆ ಮೊಬೈಲ್​ ನಂಬರ್​, ಇ ಮೇಲ್​ ಐಡಿಗಳ ವಿನಿಮಯವೂ ಆಗಿತ್ತು.

ನಂತರ ಒಂದು ದಿನ ಯುವತಿ ಪಾದ್ರಿಗೆ ಮೆಸೇಜ್​ ಮಾಡಿ..ನೀವು ನನಗೆ ತುಂಬ ಇಷ್ಟವಾಗಿದ್ದೀರಿ. ನಿಮಗೆ ಐಫೋನ್​, ಲ್ಯಾಪ್​ಟಾಪ್​ ಹಾಗೂ ಕೆಲವು ಚಿನ್ನದ ಆಭರಣಗಳನ್ನು ಉಡುಗೋರೆ ಕಳಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದಳು. ಇದನ್ನೂ ಓದಿ: ದಂಪತಿ ಇಬ್ಬರೂ ಒಪ್ಪಿ ವಿಚ್ಛೇದನ ಸಲ್ಲಿಸಿದರೆ ಜೀವನಾಂಶ ಕೊಡಬೇಕಾಗತ್ತಾ?

ಅದಾದ ಮರುದಿನ ವ್ಯಕ್ತಿಯೋರ್ವ ಪಾದ್ರಿಗೆ ಕರೆ ಮಾಡಿ, ನಾನು ನವದೆಹಲಿಯ ಐಜಿಐ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿ ಎಂದು ಪರಿಚಯಿಸಿಕೊಂಡ. ನಂತರ ಅವರಿಗೆ ಬಂದ ಪಾರ್ಸೆಲ್​ ವಿಷಯ ತಿಳಿಸಿ ಬ್ಯಾಂಕ್​ ಅಕೌಂಟ್​ವೊಂದನ್ನು ಕೊಟ್ಟು ಅದಕ್ಕೆ 3.50 ಲಕ್ಷ ರೂ. ಡಿಪೋಸಿಟ್​ ಇಡುವಂತೆ ಹೇಳಿದ. ಅದನ್ನು ನಂಬಿದ ಪಾದ್ರಿ ಆತ ಕೊಟ್ಟ ಅಕೌಂಟ್​ ನಂಬರ್​ಗೆ ಅಷ್ಟೂ ಹಣವನ್ನೂ ಹಾಕಿದ್ದರು. ಆದರೆ ಎಷ್ಟೇ ದಿನ ಕಾದರೂ ಐಫೋನ್​, ಲ್ಯಾಪ್​ಟಾಪ್..ಚಿನ್ನಾಭರಣಗಳ ಉಡುಗೋರೆ ಮಾತ್ರ ಬರಲಿಲ್ಲ. ಇದನ್ನೂ ಓದಿ: ಹಿರಿಯಡ್ಕದಲ್ಲಿ ಹಾಡಹಗಲೇ ರೌಡಿಶೀಟರ್ ಕೊಲೆ

ಅನುಮಾನ ಬಂದ ಪಾದ್ರಿ ಆ ಬ್ಯಾಂಕ್​ ಅಕೌಂಟ್​ ಬಗ್ಗೆ ವಿಚಾರಣೆ ಮಾಡಿದ. ಅದು ಉತ್ತರ ಪ್ರದೇಶದ ಬರೇಲಿಯ ಅಯೋನ್ಲಾ ಎಂಬಲ್ಲಿ ಇರುವ ಎಸ್​​ಬಿಐ ಬ್ರ್ಯಾಂಚ್​​ನ ಅಕೌಂಟ್​, ಅಕ್ವಿಲ್​ ನಬಿ ಎಂಬ ಹೆಸರಿನಲ್ಲಿದೆ ಎಂದು ಗೊತ್ತಾಯಿತು. ಅಲ್ಲಿಗೆ ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾಗಿ ಪಾದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಯುವತಿ, ಅಕ್ವಿಲ್​ ನಬಿ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net