

Chitra Nair: ಮೊದಲು ಶಿಕ್ಷಕಿಯಾಗಿ ವೃತ್ತಿ ಬದುಕು ಆರಂಭಿಸಿದ ಈಕೆ, ನಂತರ ಕಾಣಿಸಿಕೊಂಡಿದ್ದು ಬೆಳ್ಳಿಪರದೆಯಲ್ಲಿ. ಅದು ಚಿತ್ರನಟಿಯಾಗಿ. ಇತ್ತೀಚೆಗಷ್ಟೇ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಯಾಳಂ ನಟಿ ಚಿತ್ರಾ ನಾಯರ್, ಸೇನಾ ವಿಮಾನಯಾನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆನೀಶ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಸದ್ಯ ಈ ವಿಷಯ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಶಾಕಿಂಗ್ ಸಂಗತಿ ಎಂದರೆ ಚಿತ್ರಾ ಮತ್ತು ಲೆನೀಶ್ ಇಬ್ಬರಿಗೂ ಇದು ಎರಡನೇ ವಿವಾಹ! ಮದುವೆ ಸಮಾರಂಭದಲ್ಲಿ ಚಿತ್ರಾ ಅವರ ಮಗ ಮತ್ತು ಲೆನೀಶ್ ಅವರ ಮಗಳು ಸೇರಿದಂತೆ ಇಬ್ಬರ ಕುಟುಂಬಸ್ಥರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವಜೋಡಿಗೆ ಶುಭಹಾರೈಸಿದ್ದಾರೆ. ಮದುವೆ ವಿಡಿಯೋವನ್ನು ನಟಿ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಮೂಲಕ ವಿಷಯವನ್ನು ತಮ್ಮ ಪ್ರೀತಿ-ಪಾತ್ರರಿಗೆ ತಿಳಿಸಿದ್ದಾರೆ.
ಈ ಹಿಂದಿನ ಸಂದರ್ಶನದಲ್ಲಿ ವಿಚ್ಛೇದನ ಕುರಿತು ಮಾತನಾಡಿದ್ದ ಚಿತ್ರಾ, "21ನೇ ವಯಸ್ಸಿನಲ್ಲಿ ಪೋಷಕರು ನನಗೆ ಮದುವೆ ಮಾಡಿಸಿದರು. ಅದು ಪ್ರೀತಿ ಸಂಬಂಧದ ಮದುವೆಯಲ್ಲ. ಬದಲಿಗೆ ಹಿರಿಯರ ಒಪ್ಪಿಗೆ ಮೇರೆಗೆ ಆದ ವಿವಾಹ. ರಾಶಿ ಫಲ, ಜಾತಕ ಎಲ್ಲಾ ನೋಡಿ-ಮಾಡಿಯೇ ನನ್ನನ್ನು ಅವರೊಂದಿಗೆ ಮದುವೆ ಮಾಡಿಕೊಟ್ಟರು. ಆದರೆ, ಅಂತಿಮವಾಗಿ ಆಗಿದ್ದೇನು? ವಿಚ್ಛೇದನ! ನಾನು ಡಿವೋರ್ಸ್ ಪಡೆದು ಇಂದಿಗೆ ಏಂಟು ವರ್ಷಗಳು ಕಳೆದಿವೆ" ಎಂದು ಹೇಳಿದ್ದರು. ಆದರೆ, ಈಗ ಎರಡನೇ ಮದುವೆಗೆ ಕಾಲಿಟ್ಟಿದ್ದು, ಇದಕ್ಕೆ ನಟಿಯ ಪುತ್ರ ಮತ್ತು ಪತಿಯ ಪುತ್ರಿ ಇಬ್ಬರೂ ಒಪ್ಪಿಗೆ ಸೂಚಿಸಿರುವುದು ವಿಶೇಷ.
"ಯಾರಾದರೂ ಎರಡನೇ ಮದುವೆ ಬಗ್ಗೆ ಯೋಚನೆ ಮಾಡುತ್ತಿದ್ದೀರಾ ಎಂದು ಕೇಳಿದರೆ, ಖಂಡಿತವಾಗಿಯೂ ಅದರ ಬಗ್ಗೆ ಯೋಚಿಸುತ್ತೇನೆ" ಎಂದು ಚಿತ್ರಾ ಹೇಳಿದ್ದರು. "ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯಕ್ತಿ ಸಿಕ್ಕರೆ, ನಾನೇಕೆ ಬಿಟ್ಟುಕೊಡಬೇಕು? ನನ್ನ ಮಗನಿಗೂ ಈ ವಿಷಯದಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಈ ಬಾರಿ, ಜಾತಕಗಳು ಹೊಂದಿಕೆಯಾಗುತ್ತೋ? ಇಲ್ಲವೋ? ಅನ್ನೋದನ್ನ ಖಂಡಿತ ನಾನು ನೋಡಲ್ಲ" ಎಂದು ಹೇಳಿದ್ದರು.
ಶಿಕ್ಷಕಿ ವೃತ್ತಿಯಿಂದ ನಟನೆಯತ್ತ ಮುಖ ಮಾಡಿದ ಕೇರಳದ ಚಿತ್ರಾ ನಾಯರ್, ಆರಂಭಿಕ ಹಂತದಲ್ಲಿ ಶಿಕ್ಷಕಿಯಾಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೊರೊನಾ ಸಮಯದಲ್ಲಿ ತನ್ನ ವೃತ್ತಿಯನ್ನು ತೊರೆದ ಈಕೆ, ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ತೋರಿದರು. ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ದೃಢ ನಿರ್ಧಾರದಿಂದ ಆಡಿಷನ್‌ಗಳಿಗೆ ಹೋದ ಚಿತ್ರಾ, ತನಗಾಗಿ ಚಿತ್ರರಂಗದಲ್ಲಿ ಹೊಸ ಹಾದಿಯನ್ನು ಸೃಷ್ಟಿಸಿಕೊಂಡಿದ್ದು ಗಮನಾರ್ಹ.
ಮೋಹನ್ ಲಾಲ್ ಅವರ 'ಆರಟ್ಟು' ಚಿತ್ರದ ಮುಖೇನ ನಟಿಯಾಗಿ ಎಂಟ್ರಿಕೊಟ್ಟ ಚಿತ್ರಾ, ನಂತರದಲ್ಲಿ 'ಪಾರ್ಟ್‌ನರ್ಸ್', 'ಸುರೇಶಿಂಥೆಯುಮ್ ಸುಮಲತಾಯುಮ್ ಹೃದಯಹರಿಯ ಪ್ರಣಯಕಥ', 'ಪೊರಟ್ಟು ವಡಕಂ', 'ಕ್ವೀನ್ ಎಲಿಜಬೆತ್' ಮತ್ತು 'ಎನ್ನಾ ಥಾನ್ ಕೇಸ್ ಕೋಡು' ಮುಂತಾದ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ,(ಏಜೆನ್ಸೀಸ್).