ಗೃಹಲಕ್ಷ್ಮೀ ಯೋಜನೆಯ ಹಣ ಶೀಘ್ರದಲ್ಲೇ ಬಿಡುಗಡೆ; ಪಂಚ ಗ್ಯಾರಂಟಿಯ ಎಲ್ಲ ಸಮಸ್ಯೆಗಳಿಗೆ ಪರಿಹಾರ; ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್ ಪಾಟೀಲ ಭರವಸೆ

Garantee Press meet
Published on

ಹಾವೇರಿ: ಗೃಹಲಕ್ಷ್ಮೀ ಯೋಜನೆಯ ಮೂರು ಕಂತುಗಳ ಬಾಕಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪಂಚ ಗ್ಯಾರಂಟಿ ಯೋಜನೆಗಳಲ್ಲಿನ ಎಲ್ಲ ಸಮಸ್ಯೆಗಳನ್ನು ಸದ್ಯದಲ್ಲೇ ಪರಿಹರಿಸಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್ ಪಾಟೀಲ ಭರವಸೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಇವುಗಳಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ. ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ಅಧಿಕಾರಿಗಳ ಆಸಕ್ತಿಯಿಂದ ಬೆಳಗಾವಿ ಕಂದಾಯ ವಿಭಾಗದ 7 ಜಿಲ್ಲೆಗಳಲ್ಲಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಆರೋಗ್ಯ ಸಮಸ್ಯೆಯಿಂದ ಗೃಹಲಕ್ಷ್ಮೀ ಯೋಜನೆ ಹಣ ಜಮೆಯಾಗುವುದು ವಿಳಂವಾಗಿದೆ. ಕಳಪೆ ಗುಣಮಟ್ಟದ ಜೋಳ ವಿತರಣೆ ಕುರಿತು ಕ್ರಮ ಜರುಗಿಸಲಾಗುವುದು ಎಂದರು.

ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ.40ರಷ್ಟು ಹೆಚ್ಚಾಗಿದೆ. ಹೊಸದಾಗಿ 127 ಬಸ್ ಬಂದಿದ್ದು, 200 ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಳೆದ ಒಂದೂವರೆ ವರ್ಷಗಳಲ್ಲಿ 3,900 ಕೋಟಿ ರೂ. ಆದಾಯ ಲಭಿಸಿದೆ. ಪ್ರಯಾಣಿಕರೊಂದಿಗೆ, ಶಾಲಾ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ 66 ಕೇಸ್‌ಗಳಲ್ಲಿ ಚಾಲಕ-ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ ಹಿರೇಮಠ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ ಮೈದೂರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಇತರರು ಉಪಸ್ಥಿತರಿದ್ದರು.

ಹಾವೇರಿ ವಿವಿ ಉಳಿಸಲು ಪ್ರಯತ್ನ

ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಎಸ್.ಆರ್.ಪಾಟೀಲರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net