

ಬೆಂಗಳೂರು: ಕೃಷಿ ಕಾರ್ಮಿಕರು ಸೇರಿ ವಿವಿಧ ಏಳು ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಏಳು ವರ್ಷಗಳಿಂದ ಪರಿಷ್ಕರಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತಾಗಿ ಆಲ್ ಇಂಡಿಯಾ ಸೆಂಟ್ರಲ್ ಯೂನಿಯನ್ ಆಫ್ ಟ್ರೇಡ್ ಕೌನ್ಸಿಲ್ (ಎಐಸಿಸಿಟಿಯು) ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಅನಂತ್ ರಮಾನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಮುಖ್ಯ ಕಾರ್ಮಿಕ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ಮಾ.10ಕ್ಕೆ ವಿಚಾರಣೆ ಮುಂದೂಡಿತು.
ಅಧಿಸೂಚಿತ ಉದ್ಯೋಗಗಳ (ಶೆಡ್ಯೂಲ್ಡ್ ಎಂಪ್ಲಾಯ್‌ಮೆಂಟ್) ಕನಿಷ್ಠ ವೇತನವನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಆದರೆ, ಕೃಷಿ ಕಾರ್ಮಿಕರು, ಜಿಪ್ಸಂ ಹಾಗೂ ಇತರ ಗಣಿಗಾರಿಕೆ, ಕಟ್ಟಡ, ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ, ಕಲ್ಲು ಗಣಿಗಾರಿಕೆ, ಸ್ವೀಪಿಂಗ್ ಮತ್ತು ಕ್ಲೀನಿಂಗ್, ವಾಚ್ ಆ್ಯಂಡ್ ವಾರ್ಡ್, ಲೋಡಿಂಗ್, ಅನ್ ಲೋಡಿಂಗ್ ವಲಯದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿಲ್ಲ.
2017ರಲ್ಲಿ ಒಮ್ಮೆ ಪರಿಷ್ಕರಣೆ ಮಾಡಲಾಗಿತ್ತು. ಆದ್ದರಿಂದ ಸುಪ್ರೀಂಕೋರ್ಟ್‌ನ ಮಾನದಂಡಗಳಿಗೆ ಅನುಸಾರವಾಗಿ ಈ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.