ಪಹಲ್ಗಾಮ್ ಭಯೋತ್ಪಾದಕ ದಾಳಿ: ಭಾರತ vs ಪಾಕಿಸ್ತಾನ... ಚೀನಾ ಹೇಳಿದ್ದೇನು? ಬೆಂಬಲ ಕೊಟ್ಟಿದ್ದು ಯಾರಿಗೆ? Pahalgam Terror Attack

Pahalgam Terror Attack
Published on

Pahalgam Terror Attack : ಕಾಶ್ಮೀರದ ಪಹಲ್ಗಾಮ್ ಮೇಲೆ ನಡೆದ ಭಯೋತ್ಪಾದಕ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಈ ದಾಳಿಯಲ್ಲಿ ಪಾಕ್​ ಕೈವಾಡ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಭಾರತವು ಶತ್ರು ರಾಷ್ಟ್ರದ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ, ನೆರೆಯ ರಾಷ್ಟ್ರ ಚೀನಾ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗೆ, ಚೀನಾದ ವಿದೇಶಾಂಗ ಸಚಿವರು ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸಬೇಕು ಎಂದಿದ್ದಾರೆ.

ಇತ್ತೀಚೆಗೆ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ವಿದೇಶಾಂಗ ಸಚಿವರ ಜತೆ ದೂರವಾಣಿ ಕರೆ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ, ವಾಂಗ್ ಯಿ, ನಾವು ಪಾಕಿಸ್ತಾನ ಮತ್ತು ಭಾರತದ ನಡುವಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಯೋತ್ಪಾದಕ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ನಾವು ಬೆಂಬಲಿಸುತ್ತೇವೆ ಎನ್ನುವ ಮೂಲಕ ಪಾಕ್​ ಪರ ಬ್ಯಾಟ್​ ಬೀಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಎರಡೂ ದೇಶಗಳು ಸಂಯಮವನ್ನು ಕಾಯ್ದುಕೊಳ್ಳುತ್ತವೆ ಎಂದು ಬೀಜಿಂಗ್ ಆಶಿಸುತ್ತದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒಟ್ಟಾಗಿ ಕೆಲಸ ಮಾಡಬಹುದೆಂದು ಭಾವಿಸುತ್ತೇವೆ. ಭಯೋತ್ಪಾದನೆ ವಿರುದ್ಧದ ಹೋರಾಟವು ಎಲ್ಲ ದೇಶಗಳ ಸಾಮಾನ್ಯ ಜವಾಬ್ದಾರಿಯಾಗಿದೆ ಎಂದು ವಾಂಗ್​ ಯಿ ಹೇಳಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಇದೇ ಸಂದರ್ಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ರಷ್ಯಾ ಮತ್ತು ಚೀನಾ ಮಧ್ಯಪ್ರವೇಶಿಸಬೇಕೆಂದು ಪಾಕಿಸ್ತಾನ ಬಯಸುತ್ತಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮತ್ತೊಂದೆಡೆ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಖಂಡಿಸಿದ್ದಾರೆ. ಈ ವಿಷಯದಲ್ಲಿ ಭಾರತವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ದಾಳಿಯು ಭಯೋತ್ಪಾದನೆ ಎದುರಿಸುತ್ತಿರುವ ಬೆದರಿಕೆಗಳನ್ನು ಜಗತ್ತಿಗೆ ನೆನಪಿಸಿದೆ ಎಂದು ಪಟೇಲ್​ ಹೇಳಿದರು. ದಾಳಿಯ ನಂತರ ಭದ್ರತಾ ಪಡೆಗಳ ಪ್ರತಿಕ್ರಿಯೆಯನ್ನು ಸಹ ಪಟೇಲ್​ ಶ್ಲಾಘಿಸಿದರು.

ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಮಡಿದವರಿಗೆ ಎಫ್‌ಬಿಐ ಸಂತಾಪ ಸೂಚಿಸುತ್ತಿದೆ. ಇದು ಭಾರತ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪೇಟಲ್​ ಅವರು ಹೇಳಿದ್ದಾರೆ.

ಇರಾನ್ ಅಧ್ಯಕ್ಷ ಮಸೂದ್ ಪೆಜಿಜ್ಕಿಯಾನ್ ಸಹ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ಎದುರಿಸಲು ಪ್ರಾದೇಶಿಕ ಸಮನ್ವಯದ ಅಗತ್ಯವಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ದಾಳಿಯನ್ನು ಖಂಡಿಸಿದ್ದೇನೆ. ಪಹಲ್ಗಾಮ್ ದುರಂತವನ್ನು ಜಂಟಿ ಜವಾಬ್ದಾರಿಯಾಗಿ ತೆಗೆದುಕೊಂಡು ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದ್ದೇವೆ. ಅಲ್ಲದೆ, ಪ್ರಧಾನಿ ಮೋದಿಯವರನ್ನು ಇರಾನ್‌ಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದೇವೆ ಎಂದು ಇರಾನ್​ ಅಧ್ಯಕ್ಷರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net