ಬೆಂಗಳೂರಲ್ಲಿ ಇದು ನನ್ನ ಅಡ್ಡ ಎಂದಿದ್ದ ರಾಹುಲ್​ಗೆ ಕೊಹ್ಲಿ ಸ್ವೀಟ್​ ರಿವೇಂಜ್​: ಕೈಯಲ್ಲಿ ವೃತ್ತ ಬರೆದು ಅಣಕಿಸಿದ ವಿರಾಟ್​! Virat Kohli

Virat Kohli
Published on

Virat Kohli : ನಿನ್ನೆ (ಏಪ್ರಿಲ್​ 27) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪ್ರಸಕ್ತ ಐಪಿಎಲ್​ ಟೂರ್ನಿಯ 46ನೇ ಪಂದ್ಯದಲ್ಲಿ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಮತ್ತು ಆಲ್​ರೌಂಡರ್​ ಕೃನಾಲ್ ಪಾಂಡ್ಯ ನಡುವಿನ 100ಕ್ಕೂ ಅಧಿಕ ರನ್​ಗಳ ಅಮೋಘ ಜತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ಗೆದ್ದು ಬೀಗಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಕೆಎಲ್ ರಾಹುಲ್ (41) ಮತ್ತು ಸ್ಟಬ್ಸ್ (34) ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ 18.3 ಓವರ್‌ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಗುರಿಯನ್ನು ಬೆನ್ನಟ್ಟಿ ಜಯಭೇರಿ ಬಾರಿಸಿತು. ವಿರಾಟ್ ಕೊಹ್ಲಿ (51) ಮತ್ತು ಕೃನಾಲ್​ ಪಾಂಡ್ಯ (ಔಟಾಗದೆ 73) ಅದ್ಭುತ ರನ್ ಗಳಿಸುವ ಮೂಲಕ ಆರ್‌ಸಿಬಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆರಾಮವಾಗಿ ಪಂದ್ಯವನ್ನು ಗೆದ್ದುಕೊಂಡಿತು.

ಪಂದ್ಯದ ನಂತರ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಬಳಿ ಹೋಗಿ 'ಇದು ನನ್ನ ಅಡ್ಡ' ಎಂದು ಹೇಳುವ ಮೂಲಕ ಅವರನ್ನು ಅಣಕಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ತಿಂಗಳ 12ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ಭರ್ಜರಿ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತು. ಈ ಪಂದ್ಯದ ನಂತರ, ರಾಹುಲ್ ತಮ್ಮ ಬ್ಯಾಟ್‌ನಿಂದ 'ಕಾಂತಾರ' ಶೈಲಿಯಲ್ಲಿ ಮೈದಾನದಲ್ಲಿ ಒಂದು ಸುತ್ತಿನ ಗೆರೆ ಎಳೆದು 'ಇದು ನನ್ನ ತವರು ಮೈದಾನ' ಎಂದು ಸಂಭ್ರಮಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಇದೀಗ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ನಂತರ, ಕೊಹ್ಲಿ ಅವರು ರಾಹುಲ್ ಬಳಿಗೆ ಹೋಗಿ 'ಇದು ನನ್ನ ಮೈದಾನ' ಎಂದು ಕೈಯಿಂದ ಒಂದು ಸುತ್ತಿನ ಗೆರೆ ಎಳೆದು ರಾಹುಲ್​ ಅವರನ್ನು ಕೀಟಲೆ ಮಾಡಿದರು. ವಿರಾಟ್​ ಕೊಹ್ಲಿ ಅವರು ದೆಹಲಿ ಮೂಲದವರು ಎಂಬುದು ಎಲ್ಲರಿಗೂ ತಿಳಿದಿದೆ. ನಿನ್ನೆಯ ಪಂದ್ಯ ದೆಹಲಿಯಲ್ಲಿ ನಡೆದಿದ್ದರಿಂದ ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳುವ ಮೂಲಕ ರಾಹುಲ್​ ಅವರನ್ನೂ ಅಣಕಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ.

ರಿವೇಂಜ್​ ಕಂಪ್ಲೀಟ್​ ಆಯ್ತು, ಇದು ಕೊಹ್ಲಿ ಅಡ್ಡ, ಕೊಹ್ಲಿಯನ್ನು ಎದುರು ಹಾಕಿಕೊಂಡರೆ ತಕ್ಕ ಉತ್ತರ ನೀಡದೇ ಬಿಡುವುದಿಲ್ಲ ಎಂದೆಲ್ಲ ನೆಟ್ಟಿಗರು ಕಾಮೆಂಟ್​ ಮಾಡುವ ಮೂಲಕ ಕೊಹ್ಲಿಯನ್ನು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net