ಪಾಠ ಕಲಿಯದ ಚೀನಾ

China Tunnel
Published on

ಕೇಂದ್ರ ಸರ್ಕಾರ ಗಡಿಗ್ರಾಮಗಳಲ್ಲಿ ಹಿಂದೆಂದೂ ಕಾಣದಂಥ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಚೀನಾದ ಕಣ್ಣು ಕೆಂಪಾಗಿಸಿದೆ. ಕಾಲುಕೆದರಿ ವಿವಾದವನ್ನು ಸೃಷ್ಟಿಸುವ, ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡುವ ‘ಡ್ರಾ್ಯಗನ್ ರಾಷ್ಟ್ರ’ ಭಾರತದ ದಿಟ್ಟ ರಾಜತಾಂತ್ರಿಕ ಉತ್ತರಗಳಿಂದಲೂ ಪಾಠ ಕಲಿತಂತಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಅರುಣಾಚಲಕ್ಕೆ ಭೇಟಿ ನೀಡಿದ್ದನ್ನು ಮತ್ತು ಅಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದನ್ನು ವಿರೋಧಿಸುವ ಧಾಷ್ಟ್ಯ ತೋರಿರುವ ಚೀನಾ, ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ಕುರಿತಂತೆ ಸುಖಾಸುಮ್ಮನೆ ವಿವಾದ ಸೃಷ್ಟಿಸುತ್ತಿರುವುದು ಖಂಡನೀಯ.

ರಕ್ಷಣಾ ಕ್ಷೇತ್ರದಲ್ಲಿ ವ್ಯೂಹಾತ್ಮಕ ಮಹತ್ವ ಹೊಂದಿರುವ, ತವಾಂಗ್​ಗೆ ಸರ್ವಋತು ಸಂಪರ್ಕ ಕಲ್ಪಿಸುವ ಸೇಲಾ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 9ರಂದು ಅರುಣಾಚಲ ಪ್ರದೇಶದಲ್ಲಿ ಲೋಕಾರ್ಪಣೆ ಮಾಡುವ ಮೂಲಕ, ಭಾರತ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು. ಈ ಸುರಂಗದಿಂದ ಮಿಲಿಟರಿ ಸರಕುಗಳನ್ನು ತ್ವರಿತವಾಗಿ ಸಾಗಿಸಲು ಸೇನಾಪಡೆಗಳಿಗೆ ನೆರವಾಗಲಿರುವುದು, ಚೀನಾದ ಅಸಮಾಧಾನಕ್ಕೆ ಕಾರಣ. ಕಳೆದ ವರ್ಷ ಭಾರತವು ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ನಡೆಸಿದ ಒಂದು ವಾರದ ನಂತರ ಅಲ್ಲಿನ 11 ಸ್ಥಳಗಳನ್ನು ಮರುನಾಮಕರಣ ಮಾಡುವ ಉದ್ಧಟತನವನ್ನು ಚೀನಾ ತೋರಿದರೂ ಭಾರತವು ರಾಜತಾಂತ್ರಿಕ ರೀತಿಯಲ್ಲಿ ಇದನ್ನು ತಿರಸ್ಕರಿಸಿತು.

ಭಾರತ-ಚೀನಾ ಗಡಿಗೆ ಹೊಂದಿಕೊಂಡಿರುವ ಹಳ್ಳಿಗಳ ಸಮಗ್ರ ಅಭಿವೃದ್ಧಿ ಉದ್ದೇಶವಿರುವ 4800 ಕೋಟಿ ರೂಪಾಯಿ ಮೊತ್ತದ ಕೇಂದ್ರ ಸರ್ಕಾರ ನೆರವಿನ ಯೋಜನೆಯಾದ ಸ್ಪಂದನ ಗ್ರಾಮ ಕಾರ್ಯಕ್ರಮಕ್ಕೆ (ವೈಬ್ರಂಟ್ ವಿಲೇಜಸ್ ಪ್ರೊಗ್ರಾಂ- ವಿವಿಪಿ) 2023ರ ಏಪ್ರಿಲ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಾಲನೆ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಭಾರತದ ಈ ಆಕ್ರಮಕ ನಿಲುವಿಗೆ, ಗಡಿಭಾಗದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿಗೆ ಚೀನಾ ತಳಮಳಗೊಂಡಿದೆ.

ಗಡಿ ವಿವಾದವನ್ನು ಜೀವಂತವಾಗಿ ಇಡಲು ಸದಾ ಒಂದಿಲ್ಲ ಒಂದು ತಂಟೆ ತೆಗೆಯುವುದು ಆ ರಾಷ್ಟ್ರದ ನೀತಿಯೇ ಆಗಿಹೋಗಿದೆ. 2017ರ ಜೂನ್​ನಲ್ಲಿ ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ರಸ್ತೆ ನಿರ್ಮಾಣ ಸಾಮಗ್ರಿಗಳೊಂದಿಗೆ ರಸ್ತೆ ನಿರ್ವಿುಸಲು ಮುಂದಾದಾಗ ಭಾರತೀಯ ಸೈನಿಕರು ತಡೆದರು. 2020ರ ಜೂನ್ 15ರಂದು ಲಡಾಖ್​ನ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಹಲ್ಲೆ ನಡೆಸಿದ್ದರಿಂದಾಗಿ ಭಾರತದ 20 ಸೈನಿಕರು ಹುತಾತ್ಮರಾದರು. ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದರಿಂದ ತನ್ನ 6 ಸೈನಿಕರು ಪ್ರಾಣ ಕಳೆದುಕೊಂಡರು ಎಂದು ಚೀನಾ ತಡವಾಗಿ ಒಪ್ಪಿಕೊಂಡಿತ್ತು. 2022ರ ಡಿಸೆಂಬರ್ 9ರಂದು ಅರುಣಾಚಲದ ತವಾಂಗ್​ನಲ್ಲಿ ಎಲ್​ಎಸಿ ದಾಟಿ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದ್ದನ್ನು ಭಾರತೀಯ ಸೈನಿಕರು ತಡೆದಿದ್ದರು. ತಂಟೆಕೋರ ಚೀನಾದ ಇಂತಹ ನಡೆಗಳಿಂದಾಗಿ ಭಾರತ-ಚೀನಾ ಗಡಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ಉದ್ವಿಗ್ನತೆ ನೆಲೆಸಿದೆ. ಚೀನಾ ಹೇಗೆ ವರ್ತಿಸುತ್ತಿದೆ ಎಂಬುದಕ್ಕೆ ಹಲವಾರು ದಶಕಗಳ ಇತಿಹಾಸ ಹಾಗೂ ಇತ್ತೀಚಿನ ಇಂತಹ ಘಟನೆಗಳೇ ಕಣ್ಮುಂದೆ ಇದ್ದು, ಭಾರತವು ದಿಟ್ಟ ಪ್ರತ್ಯುತ್ತರ ನೀಡಬೇಕಿದೆ. ಚೀನಾದ ಕುತಂತ್ರಗಳನ್ನು ಮಣಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net