ಆಯಸ್ಸು ಹೆಚ್ಚಿಸುವ ತಂತ್ರ ಕಂಡುಕೊಂಡ ಚೀನಾ! ಹೀಗೆ ಮಾಡಿದರೆ ಯುವಕರಾಗಿಯೇ ಇರಬಹುದಂತೆ!

china
Published on

ಬೀಜಿಂಗ್​: ಚೀನಾದ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಸದಾ ಒಂದಿಲ್ಲೊಂದು ಹೊಸ ಆವಿಷ್ಕಾರಗಳನ್ನು ಚೀನಾ ಮಾಡುತ್ತಲೇ ಇರುತ್ತದೆ. ಇದೀಗ ಮನುಷ್ಯನ ಆಯಸ್ಸನ್ನು ಹೆಚ್ಚಿಸುವ ತಂತ್ರವನ್ನೂ ಚೀನಾ ಕಂಡುಕೊಂಡಿದೆ. ಚಿರ ಯೌವನ ಕಾಪಾಡಿಕೊಳ್ಳಲೂ ಈ ಐಡಿಯಾ ಬೆಸ್ಟ್​ ಎಂದು ಹೇಳಿದ್ದಾರೆ ಸಂಶೋಧಕರು.

ಇನ್​ಸ್ಟಿಟ್ಯೂಟ್​ ಆಫ್​ ಜೂವಾಲಜಿ ಆಫ್​ ಚೈನೀಸ್​ ಅಕಾಡೆಮಿ ಆಫ್​ ಸೈನ್ಸಸ್​ (ಸಿಎಎಸ್​)ನ ಪ್ರೊಫೆಸರ್ ಕು ಜಿಂಗ್​ ಅವರ ತಂಡ ಇಂತದ್ದೊಂದು ಸಂಶೋಧನೆಯನ್ನು ಮಾಡಿದೆ. ಮನುಷ್ಯನಿಗೆ ಅಥವಾ ಯಾವುದೇ ಪ್ರಾಣಿಗೆ ಏಕಾಗಿ ಬೇಗ ವಯಸ್ಸಾಗುತ್ತದೆ ಎಂದು ಅರಿಯಲು ಸಾವಿರಾರು ಜೀವಕೋಶಗಳ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ kat7 ಹೆಸರಿನ ಜೀವಕೋಶದಿಂದಾಗಿ ಪ್ರಾಣಿ, ಮನುಷ್ಯನ ವಯಸ್ಸು ಹೆಚ್ಚಾಗುವುದು ತಿಳಿದುಬಂದಿದೆ. ಈ ಜೀವಕೋಶವನ್ನು ಕೆಲಸ ಮಾಡದಂತೆ ಮಾಡಿದರೆ ವಯಸ್ಸು ಬೇಗ ಆಗುವುದು ಕಡಿಮೆಯಾಗುತ್ತದೆ ಎಂದು ಅರಿತ ತಂಡ ಅದಕ್ಕೆಂದು ಅಧ್ಯಯನ ನಡೆಸಿ, ಆ ಕೆಲಸದಲ್ಲಿ ಸಕ್ರಿಯವಾಗಿದೆ. ಆದರೆ ಕೇವಲ kat7 ಮಾತ್ರವಲ್ಲ, ಹಲವು ಜೀವಕೋಶಗಳಿಂದಾಗಿ ವಯೋ ಸಹಜ ಬದಲಾವಣೆಗಳು ಆಗುತ್ತವೆ. ಅವೆಲ್ಲದರಲ್ಲೂ ಮುಖ್ಯ ಪಾತ್ರ kat7 ವಹಿಸುತ್ತದೆ.

ಇಲಿಯ ಮೇಲೆ ಈ ರೀತಿಯ ಪ್ರಯೋಗ ಮಾಡಲಾಗಿದೆ. ಇಲಿಗಳ ಕರುಳಿನಲ್ಲಿದ್ದ kat7 ಜೀವಕೋಶ ನಿಷ್ಕ್ರಿಯವಾಗುವಂತೆ ಮಾಡಲಾಗಿದೆ. ಇದರಿಂದಾಗಿ ಇಲಿಗಳಲ್ಲಿ 6ರಿಂದ 8 ತಿಂಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆಯಂತೆ. ವಯಸ್ಸಾಗಿ ದುರ್ಬಲವಾಗ ಬೇಕಿದ್ದ ಇಲಿಗಳು ಇನ್ನಷ್ಟು ಬಲಶಾಲಿಯಾದವಂತೆ. ವಯೋಸಹಜ ಬದಲಾವಣೆಗಳು ಅವುಗಳಲ್ಲಿ ಆಗಿಲ್ಲವಂತೆ. ಇದರಿಂದಾಗಿ ಅವುಗಳು ಆಯಸ್ಸು ಶೇ. 25 ಹೆಚ್ಚಳವಾಗಿರುವುದಾಗಿ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಇದೇ ರೀತಿ ಮನುಷ್ಯನ ದೇಹದ kat7 ಜೀವಕೋಶವನ್ನು ನಿಷ್ಕ್ರಿಯ ಮಾಡುವುದರಿಂದ ಆತನ ಆಯಸ್ಸನ್ನೂ ಹೆಚ್ಚಿಸಬಹುದು. ಅದರೆ ಅದಕ್ಕಿಂತ ಮೊದಲು kat7 ಜೀವಕೋಶದ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಿದೆ. ಅದಕ್ಕೆ ಆರೋಗ್ಯ ಇಲಾಖೆ ಮತ್ತು ಸರ್ಕಾರದಿಂದ ಅನುಮತಿ ದೊರೆಯಬೇಕಿದೆ. ಅನುಮತಿ ಸಿಕ್ಕು, ಅಧ್ಯಯನ ಆದ ನಂತರ ಅದನ್ನು ಮನುಷ್ಯರ ಮೇಲೆ ಕ್ಲಿನಿಕಲ್​ ಟ್ರಯಲ್​ ಮಾಡಬಹುದು ಎಂದು ಸಂಶೋಧನಾ ತಂಡ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net