ಗಡಿಯಲ್ಲಿ ಗಸ್ತು ಹೆಚ್ಚಳ: ಪ್ಯಾಂಗಾಂಗ್​ನ ಉತ್ತರ ದಂಡೆಯಲ್ಲಿ ಬೀಡುಬಿಟ್ಟ ಚೀನಾ ಸೇನೆ

Ladakh-china
Published on

ನವದೆಹಲಿ: ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯ ಪ್ರದೇಶದಲ್ಲಿ ಸೋಮವಾರ ನಡೆಸಿದ ಒತ್ತುವರಿ ಯತ್ನ ವಿಫಲವಾದ ನಂತರ ಚೀನಾ ಸೇನೆ ಉತ್ತರ ದಂಡೆಯಲ್ಲಿ ಮಂಗಳವಾರ ಬಿರುಸಿನ ಚಟುವಟಿಕೆ ಆರಂಭಿಸಿದೆ. ಫಿಂಗರ್- 3 ಪ್ರದೇಶದಲ್ಲಿ ಸೇನೆ ಜಮಾವಣೆ ಚುರುಕುಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಭಾರತದ ವಾಯುಪಡೆ ವೈಮಾನಿಕ ಚಟುವಟಿಕೆಯನ್ನು ತೀವ್ರಗೊಳಿಸಿದೆ. ಸುಖೋಯ್, ಮಿಗ್ ಮತ್ತು ಸರಕು ಸಾಗಣೆ ವಿಮಾನಗಳ ಹಾರಾಟ ಹೆಚ್ಚಿಸಲಾಗಿದ್ದು, ಮಂಗಳವಾರ ಸಂಜೆಯಿಂದ ಮಧ್ಯರಾತ್ರಿಯವರೆಗೂ ವಿಮಾನಗಳ ಹಾರಾಟದ ಸದ್ದು ಕೇಳುತ್ತಿತ್ತು ಎಂದು ಲೇಹ್​ನ ಸ್ಥಳೀಯರು ತಿಳಿಸಿದ್ದಾರೆ. ವಿಮಾನಗಳ ಗಸ್ತನ್ನು ದ್ವಿಗುಣಗೊಳಿಸಲಾಗಿದೆ. ಜತೆಗೆ ಪೂರ್ವ ಲಡಾಖ್​ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್​ಎಸಿ) ನಿಯೋಜಿಸಲಾಗಿರುವ ಸೇನೆಗೆ ಅತ್ಯಂತ ಕಟ್ಟೆಚ್ಚೆರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ 8 ಫಿಂಗರ್ ಪಾಯಿಂಟ್​ಗಳಿದ್ದು, ಇವೆಲ್ಲವೂ ಭಾರತೀಯ ಸೇನೆಯ ಗಸ್ತು ಪ್ರದೇಶ. ಆದರೆ, ಕಳೆದ ಏಪ್ರಿಲ್ ಕಡೆಯ ವಾರದವರೆಗೆ ಸೇನೆಯು ಫಿಂಗರ್-4ರ ಆಚೆಗೆ ಗಸ್ತು ನಡೆಸಿರಲಿಲ್ಲ. ಇದರ ದುರ್ಲಾಭ ಪಡೆದ ಚೀನಾ ಫಿಂಗರ್-5ರವರೆಗೂ ಸೇನಾ ಜಮಾವಣೆ, ಅನೇಕ ಕಾಮಗಾರಿಯನ್ನು ಮಾಡಿಕೊಂಡಿದೆ. ಮೇ ಮೊದಲ ವಾರದಲ್ಲಿ ಭಾರತದ ಸೇನೆ ಮತ್ತೆ ಗಸ್ತು ಹೊರಟಾಗ ಚೀನಾ ಸೇನೆ ಜತೆಗೆ ಘರ್ಷಣೆ ನಡೆದಿತ್ತು.

ತಂತ್ರ-ಪ್ರತಿತಂತ್ರ: ಭಾರತದ ಸೇನೆ ಒತ್ತಡಕ್ಕೆ ಒಳಗಾಗಿ ಗುಂಡಿನ ಕಾಳಗಕ್ಕೆ ಮುಂದಾಗುತ್ತದೆ. ಇದರಿಂದ ಭಾರತ ಮಾತುಕತೆಗೆ ಹಾತೊರೆಯುತ್ತದೆ ಎಂಬುದು ಚೀನಾ ಸೇನೆಯ ಒಳಮರ್ಮ. ಇದಕ್ಕಾಗಿಯೇ ದಕ್ಷಿಣ ದಂಡೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಚೋದಿಸಿತ್ತು. ಆದರೆ, ನಮ್ಮ ಯೋಧರು ಬಹಳ ಸಂಯಮದಿಂದ ಪರಿಸ್ಥಿತಿ ನಿಭಾಯಿಸಿದರು. ಚೀನಾ ಯಾವ ರೀತಿಯಲ್ಲಿ ತಂತ್ರ ಹೆಣೆಯುತ್ತಿದೆಯೊ, ಅದೇ ರೀತಿಯ ಪ್ರತಿತಂತ್ರ ಹೂಡಲು ನಾವೂ ಸಿದ್ಧರಾಗಿದ್ದೇವೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಲಡಾಖ್​ನ ಎಲ್​ಎಸಿ ಬಳಿ ಸೇನೆ ಹಿಂಪಡೆಯುವ ಮೂಲಕ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸಲು ಭಾರತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸೇನೆ, ರಾಜತಾಂತ್ರಿಕ ಮಾರ್ಗ ಮತ್ತು ರಾಜಕೀಯ ನಾಯಕರ ಮಧ್ಯೆ ಮಾತುಕತೆ ಜಾರಿಯಲ್ಲಿ ಇದೆ. ಆದರೆ, ಚೀನಾ ಸೇನೆಯೇ ಪ್ರಚೋದನಾತ್ಮಕ ಚಟುವಟಿಕೆಯ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ. ನಮ್ಮ ಸೇನೆ ಎಲ್​ಎಸಿ ದಾಟಿಲ್ಲ ಮತ್ತು ಗಾಳಿಯಲ್ಲಿ ಗುಂಡನ್ನೂ ಹಾರಿಸಿಲ್ಲ. | ಭಾರತದ ರಕ್ಷಣಾ ಸಚಿವಾಲಯ

ಜಿನ್​ಪಿಂಗ್ ಆಪ್ತ ಕಿಮ್ ಭಾರತ ಗಾಳ? 72ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿರುವ ಉತ್ತರ ಕೊರಿಯಾಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಶುಭಾಶಯ ಕೋರಿದ್ದಾರೆ. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್​ಗೆ ಬರೆದ ಈ ಪತ್ರವನ್ನು ನವದೆಹಲಿಯಲ್ಲಿರುವ ಉತ್ತರ ಕೊರಿಯಾದ ರಾಯಭಾರಿ ತಮ್ಮ ದೇಶದ ವಿದೇಶಾಂಗ ಖಾತೆ ಉಪಸಚಿವರಿಗೆ ಹಸ್ತಾಂತರಿಸಿದ್ದಾರೆ. ಪೂರ್ವ ಲಡಾಖ್​ನಲ್ಲಿ ಚೀನಾ ಜತೆಗೆ ಗಡಿ ಬಿಕ್ಕಟ್ಟು ಉಲ್ಬಣಿಸಿರುವ ಸಂದರ್ಭದಲ್ಲಿ ಚೀನಾಗೆ ಪರಮಾಪ್ತ ರಾಷ್ಟ್ರವಾಗಿರುವ ಉತ್ತರ ಕೊರಿಯಾವನ್ನು ತನ್ನಡೆಗೆ ಸೆಳೆದುಕೊಳ್ಳಲು ಭಾರತ ನಡೆಸಿರುವ ಚತುರ ರಾಜತಾಂತ್ರಿಕ ನಡೆ ಇದು ಎಂದು ವಿಶ್ಲೇಷಿಸಲಾಗಿದೆ.

ಇದಕ್ಕೂ ಮೊದಲು ಉತ್ತರ ಕೊರಿಯಾದಲ್ಲಿರುವ ಭಾರತದ ರಾಯಭಾರಿಯು ಅಧ್ಯಕ್ಷ ಕಿಮ್ ಜಾಂಗ್ ಉನ್​ಗೆ ಶುಭಾಶಯ ಕೋರಿ ಪತ್ರ ಬರೆದಿದ್ದರು. ಇದು ಕೊರಿಯಾದ ಅಧಿಕೃತ ಗೆಜೆಟ್​ನಲ್ಲೂ ಪ್ರಕಟವಾಗಿದೆ ಮತ್ತು ಮಾಧ್ಯಮಗಳಲ್ಲೂ ಪ್ರಸಾರ ಮಾಡಲಾಗಿದೆ. ತನ್ನನ್ನು ವಿಶ್ವಸಮುದಾಯ ಉಪೇಕ್ಷಿಸಿರುವ ಸಂದರ್ಭದಲ್ಲಿ ಯಾವುದೇ ರಾಷ್ಟ್ರದಿಂದ ರಾಜತಾಂತ್ರಿಕವಾಗಿ ಬರುವ ಶುಭ ಸಂದೇಶಗಳನ್ನು ಉತ್ತರ ಕೊರಿಯಾ ಸಾರ್ವತ್ರಿಕವಾಗಿ ಪ್ರಕಟಿಸುತ್ತಿದೆ. ಕರೊನಾ ಸಂಕಷ್ಟದ ವೇಳೆಯಲ್ಲಿ ಉತ್ತರ ಕೊರಿಯಾಕ್ಕೆ 7.35 ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಸಹಾಯವನ್ನು ಭಾರತ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಮನವಿಯ ಮೇರೆಗೆ ಈ ನೆರವನ್ನು ಭಾರತ ಒದಗಿಸಿದೆ.

ಇಂದು ಮಹತ್ವದ ಸಭೆ: ರಷ್ಯಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಸಚಿವರ ಮಟ್ಟದ ಸಭೆಯಲ್ಲಿ ಭಾಗಿಯಾಗಲು ವಿದೇಶಾಂಗ ಸಚಿವ ಜೈಶಂಕರ್ ಮಾಸ್ಕೊಗೆ ತೆರಳಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಗುರುವಾರ ಭೇಟಿಯಾಗಲಿದ್ದಾರೆ. ಪೂರ್ವ ಲಡಾಖ್​ನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇವರಿಬ್ಬರ ಮಧ್ಯೆ ಚರ್ಚೆ ಅತ್ಯಂತ ಮಹತ್ವದ್ದಾಗಿದೆ. ಕಳೆದ ಶುಕ್ರವಾರ ಭಾರತ ಮತ್ತು ಚೀನಾ ರಕ್ಷಣಾ ಸಚಿವರ ಸಭೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net