ಎಷ್ಟೇ ಬೇಯಿಸಿದ್ರೂ ಅದು ಹೋಗಲ್ಲ! ಚಿಕನ್​ ಅಂದ್ರೆ ಪಂಚಪ್ರಾಣ ಅನ್ನೋರಿಗೆ ಇಲ್ಲಿದೆ ಆಘಾತಕಾರಿ ಸುದ್ದಿ | Chicken

Chicken
Published on

ನವದೆಹಲಿ: ನಾನ್​ ವೆಜ್ ಪ್ರಿಯರಿಗೆ ಚಿಕನ್ ( Chicken ) ಎಂದರೆ ಪಂಚಪ್ರಾಣ. ಹೆಚ್ಚಿನವರು ಚಿಕನ್ ಇಲ್ಲದೇ ಇರಲಾರರು. ಒಂದು ತುಂಡು ಚಿಕನ್​ ಸೇವಿಸದಿದ್ದರೆ ಆ ದಿನ ಕಂಪ್ಲೀಟ್​ ಆಗುವುದಿಲ್ಲ ಅನ್ನೋ ಭಾವನೆ ಅನೇಕರಲ್ಲಿದೆ. ಇನ್ನು ಬಹುತೇಕರಿಗೆ ವಾರಕ್ಕೆ ಒಮ್ಮೆಯಾದರೂ ಚಿಕನ್​ ತಿನ್ನದೇ ಹೋದರೆ ಸಮಾಧಾನ ಆಗುವುದಿಲ್ಲ. ತನ್ನ ರುಚಿಯಿಂದಲೇ ಎಲ್ಲರ ಮನ ಸೆಳೆದಿರುವ ಚಿಕನ್​ ಇಂದು ಹೆಚ್ಚಿನ ಮಂದಿ ಆಸ್ವಾದಿಸುತ್ತಿರುವ ಫೇವರಿಟ್​ ಖಾದ್ಯವಾಗಿದೆ. ಹೀಗಾಗಿಯೇ ಇಂದು ಚಿಕನ್​ಗೆ ತುಂಬಾ ಬೇಡಿಕೆ ಇದೆ. ಇದೇ ಸಂದರ್ಭದಲ್ಲಿ ಚಿಕನ್​ ಕುರಿತಾಗಿ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಕೇರಳದಲ್ಲಿ ಮಾರಾಟವಾಗುವ ಬ್ರಾಯ್ಲರ್ ಕೋಳಿಗಳಲ್ಲಿ ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆಂಟ್ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್ ) ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬಹಿರಂವಾಗಿದೆ. ಕೇರಳದ ಜೊತೆಗೆ ದಕ್ಷಿಣ ಭಾರತದ ಮತ್ತೊಂದು ರಾಜ್ಯವಾದ ತೆಲಂಗಾಣದಿಂದ ಸಂಗ್ರಹಿಸಲಾದ ಚಿಕನ್​ ಮಾದರಿಗಳಲ್ಲಿಯೂ ಕೇರಳ ಮಾದರಿಯ ಜೀನ್ ಪ್ರೊಫೈಲ್ ದೃಢವಾಗಿದೆ.

ಐಸಿಎಂಆರ್​ ನಡೆಸಿದ ಪರೀಕ್ಷೆಯಲ್ಲಿ ಪ್ರತಿರೋಧಕ ವ್ಯವಸ್ಥೆ ಅಂದರೆ, ಆ್ಯಂಟಿಬಯೋಟಿಕ್​ ಅನ್ನು ನಿರೋಧಿಸುವ ಬ್ಯಾಕ್ಟೀರಿಯಾ ಇರುವುದು ತಿಳಿದಿಬಂದಿದೆ. ಇದನ್ನು ಅಪಾಯಕಾರಿ ಪರಿಸ್ಥಿತಿ ಎಂದು ಪರಿಗಣಿಸಲಾಗಿದೆ. ಕೋಳಿ ಸಾಕಾಣಿಕೆ ವೇಳೆ ಆ್ಯಂಟಿಬಯೋಟಿಕ್​ ಬಳಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಅಲ್ಲದೆ, ಬೇರೆ ರಾಜ್ಯಗಳಿಂದ ಆಗಮಿಸುವ ಬ್ರಾಯ್ಲರ್ ಕೋಳಿಗಳನ್ನು ಯಾವುದೇ ತಪಾಸಣೆಗಳಿಲ್ಲದೆ ಹೆಚ್ಚಾಗಿ ಮಾರಾಟ ಮಾಡುವುದರಿಂದಲೂ ಕೇರಳದಲ್ಲಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಆ್ಯಂಟಿಬಯೋಟಿಕ್​ಗಳ ಬಳಕೆ ಹೆಚ್ಚಾದಂತೆ ಬ್ಯಾಕ್ಟೀರಿಯಾಗಳೂ ಕೂಡ ಹೆಚ್ಚಾಗುತ್ತಿವೆ ಎಂದು ಐಸಿಎಂಆರ್ ತನ್ನ ಅಧ್ಯಯನದಲ್ಲಿ ಸ್ಪಷ್ಟಪಡಿಸಿದೆ.

ಈ ಅಧ್ಯಯನವು ICMR - ಡ್ರಗ್ಸ್ ಸೇಫ್ಟಿ ವಿಭಾಗ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಹೈದರಾಬಾದ್) ವಿಭಾಗದಿಂದ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ವಿವಿಧ ಪ್ರದೇಶಗಳಿಂದ ಕೋಳಿಯ ಮಲವನ್ನು ಸಂಗ್ರಹಿಸಿ ಡಿಎನ್ಎ ಪ್ರತ್ಯೇಕಿಸಿ ಅಧ್ಯಯನ ನಡೆಸಲಾಗಿದೆ.

ಔಷಧಗಳಿಂದಲೂ ಬದುಕುಳಿದಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳ ಪಟ್ಟಿಯನ್ನು ಐಸಿಎಂಆರ್ ಸಿದ್ಧಪಡಿಸಿದೆ. ಇವುಗಳಲ್ಲಿ ಕೇರಳದ ಬ್ರಾಯ್ಲರ್ ಕೋಳಿಗಳಲ್ಲಿ ನ್ಯುಮೋನಿಯಾ ಉಂಟು ಮಾಡುವ ಸ್ಟ್ಯಾಫಿಲೋಕೊಕಸ್ ನ್ಯುಮೋನಿಯಾ, ಅತಿಸಾರ ರೋಗಗಳಿಗೆ ಕಾರಣವಾಗುವ ಇ-ಕೊಲಿ, ಚರ್ಮರೋಗಗಳಿಗೆ ಕಾರಣವಾಗುವ ಸ್ಟ್ಯಾಫಿಲೊಕೊಕಸ್ ಪತ್ತೆಯಾಗಿವೆ. ಉಸಿರಾಟದ ಕಾಯಿಲೆಗಳ ಜೊತೆಗೆ ಮೂತ್ರದ ಸೋಂಕುಗಳು ಮತ್ತು ಹೊಟ್ಟೆಯ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ಸೇರಿವೆ. ಚಿಕನ್​ ಅನ್ನು ಎಷ್ಟೇ ಚೆನ್ನಾಗಿ ಬೇಯಿಸಿದರೂ ಕೆಲವು ಬ್ಯಾಕ್ಟೀರಿಯಾಗಳು ಬದುಕಬಲ್ಲವು ಎಂದು ಆದ್ಯಯನ ತಿಳಿಸಿದೆ.

ಕೇರಳವನ್ನು ಮೂರು ವಲಯಗಳಾಗಿ ವಿಂಗಡಿಸಿ ಅಧ್ಯಯನಕ್ಕಾಗಿ ಬಾಯ್ಲರ್​ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಉತ್ತರ ವಲಯದಲ್ಲಿ ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳು, ಮಧ್ಯ ವಲಯದಲ್ಲಿ ಎರ್ನಾಕುಲಂ ಮತ್ತು ಕೊಟ್ಟಾಯಂ ಮತ್ತು ದಕ್ಷಿಣ ವಲಯದಲ್ಲಿ ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳು ಇವೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಪ್ರದೇಶದಲ್ಲಿ ಇಂತಹ ಬ್ಯಾಕ್ಟೀರಿಯಾಗಳ ಉಪಸ್ಥಿತಿಯು ಹೆಚ್ಚು ಎಂದು ತಿಳಿದುಬಂದಿದೆ. ಕರ್ನಾಟಕದ ರಾಜ್ಯದಲ್ಲೂ ಇದೇ ಪರಿಸ್ಥಿತಿ ಇದ್ದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net