

ವಾಷಿಂಗ್ಟನ್: ಪ್ರವಾಸಕ್ಕೆ ತೆರಳಿದಾಗ ಹೊರಗಡೆ ಅಡುಗೆ ಮಾಡಿ ತಿನ್ನುವುದು ಸರ್ವೇ ಸಾಮಾನ್ಯ. ಆದರೆ ಉದ್ಯಾನವನಕ್ಕೆ ಹೊದಾಗ ಅಲ್ಲಿನ ಬಿಸಿ ನೀರಿನ ಬುಗ್ಗೆ (ಹಾಟ್ ಸ್ಪ್ರಿಂಗ್)ಯಲ್ಲಿಯೇ ಅಡುಗೆ ಮಾಡಿದರೆ? ಅದರಲ್ಲೂ ಎರಡು ಜೀವಂತ ಕೋಳಿಯನ್ನ ಅಲ್ಲೇ ಬೇಯಿಸಿ ತಿಂದುಬಿಟ್ಟರೆ? ಇಂತದ್ದೇ ಒಂದು ಹುಚ್ಚಾಟ ಮಾಡಿದ ಅಮೆರಿಕದ ಪ್ರಜೆಯೊಬ್ಬ ಈಗ ಉದ್ಯಾನವನಕ್ಕೆ ಕಾಲಿಡದಂತಹ ಸ್ಥಿತಿಗೆ ಬಂದು ತಲುಪಿದ್ದಾನೆ.
ಭೌಗೋಳಿಕ ಅದ್ಭುತಗಳು ನಮ್ಮಲ್ಲಿ ಸಾಕಷ್ಟಿದೆ. ಅದರಂತೆ ಒಂದು ಈ ಹಾಟ್ ಸ್ಪ್ರಿಂಗ್. ಭೂಮಿಯ ಮೇಲ್ಭಾಗದಲ್ಲಿ ಸದಾ ಬಿಸಿ ಕೆಂಡಂತಿರುವ ಸ್ಥಳದಲ್ಲಿ ನೀರು ತುಂಬಿಕೊಂಡು ನೀರೂ ಸಹ ಬಿಸಿಯಾಗಿರುತ್ತದೆ. ಬಹುತೇಕ ಹಾಟ್ ಸ್ಪ್ರಿಂಗ್ಗಳು ಸಾಮಾನ್ಯ ಬಿಸಿ ನೀರನ್ನು ಹೊಂದಿರುತ್ತದೆ. ಆದರೆ ಎಲ್ಲೋ ಕೆಲವು ಹಾಟ್ ಸ್ಪ್ರಿಂಗ್ಗಳಲ್ಲಿ ಕುದಿಯುವಷ್ಟು ಬಿಸಿ ನೀರು ಸಹ ಇರುತ್ತದೆ. ಇಂಥಹ ವಿಶೇಷ ಹಾಟ್ ಸ್ಪ್ರಿಂಗ್ಗಳನ್ನು ನಾವು ಅಮೆರಿಕದ ಯೆಲ್ಲೋಸ್ಟೋನ್ ಪಾರ್ಕ್ನಲ್ಲಿ ಕಾಣಬಹುದು.
ಆಗಸ್ಟ್ ತಿಂಗಳಲ್ಲಿ 10 ಜನರ ಯುವಕರ ಗುಂಪು ಈ ಯೆಲ್ಲೋಸ್ಟೋನ್ ಪಾರ್ಕ್ಗೆ ತೆರಳಿತ್ತು. ಸುಮ್ಮನೆ ಹೋಗದ ಈ ಗುಂಪು ಎರಡು ಕೋಳಿ ಮತ್ತು ಅದನ್ನು ಬೇಯಿಸಿ ತಿನ್ನಲು ಬೇಕಾದ ಪಾತ್ರೆ, ಉಪ್ಪು, ಕಾರವನ್ನೂ ತೆಗೆದುಕೊಂಡು ಹೋಗಿತ್ತು. ಹಾಟ್ ಸ್ಪ್ರಿಂಗ್ನ ಬಿಸಿ ನೀರಿನಲ್ಲಿ ಕೋಳಿ ಬೇಯಿಸಿಕೊಂಡು ತಿನ್ನುವುದು ಅವರ ಉದ್ದೇಶವಾಗಿತ್ತು. ಆದರೆ ಇದನ್ನು ಗಮನಿಸಿದ ಪಾರ್ಕ್ ಸಿಬ್ಬಂದಿ ಗುಂಪನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದೆ. ಅದರೆ ಆ ಸಮಯದಲ್ಲಿ ಒಂಬತ್ತು ಜನರು ತಪ್ಪಿಸಿಕೊಂಡಿದ್ದು, ಒಬ್ಬ ಮಾತ್ರ ಸಿಕ್ಕಿಹಾಕಿಕೊಂಡಿದ್ದಾನೆ.
ತಪ್ಪೊಪ್ಪಿಕೊಂಡಿರುವ ಆತನಿಗೆ ಎರಡು ವರ್ಷಗಳ ಕಾಲ ಪಾರ್ಕ್ಗೆ ಬಾರದಿರುವಂತೆ ನಿರ್ಬಂಧ ಹೇರಲಾಗಿದೆ. ಅದರ ಜತೆಗೆ 600 ಡಾಲರ್ ದಂಡವನ್ನು ವಿಧಿಸಲಾಗಿದೆ. ಪ್ರಕೃತಿ ಜತೆಯಲ್ಲಿ ಆಟವಾಡಲು ಹೋದ ಯುವಕನಿಗೆ ಇದೀಗ ತನ್ನ ತಪ್ಪಿನ ಅರಿವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.