ಆರ್‌ಸಿಬಿ ತಂಡ ಈ ಸಲ ಕಪ್ ಗೆಲ್ಲಲಿ ಎಂದು ಹಾರೈಸಿದ ಕ್ರಿಸ್ ಗೇಲ್

gayle kohli web
Published on

ಬೆಂಗಳೂರು: ‘ಈ ಸಲ ಕಪ್ ನಮ್ದೇ’ ಎಂಬುದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳ ೋಷವಾಕ್ಯ. ಐಪಿಎಲ್ 13ನೇ ಆವೃತ್ತಿಯಲ್ಲಿ ಕೊನೆಗೂ ಈ ಮಾತನ್ನು ನಿಜವಾಗಿಸುವ ಸನಿಹದಲ್ಲಿ ಇದೀಗ ಆರ್‌ಸಿಬಿ ತಂಡ ನಿಂತಿದೆ. 3 ವರ್ಷಗಳ ಬಳಿಕ ಪ್ಲೇಆಫ್​ ಹಂತಕ್ಕೇರಿರುವ ಆರ್‌ಸಿಬಿ ತಂಡ, ಶುಕ್ರವಾರದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ, ಆರ್‌ಸಿಬಿ ತಂಡ ಕಪ್ ಗೆಲ್ಲಲಿ ಎಂದು ತಂಡದ ಮಾಜಿ ಆಟಗಾರರಾಗಿರುವ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾರೈಸಿದ್ದಾರೆ.

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ 32ನೇ ವರ್ಷಕ್ಕೆ ಕಾಲಿಟ್ಟರು. ಈ ಹಿನ್ನೆಲೆಯಲ್ಲಿ ಅವರಿಗೆ ಎಲ್ಲೆಡೆಯಿಂದ ಶುಭಹಾರೈಕೆಗಳು ಹರಿದುಬಂದವು. ಕ್ರಿಸ್ ಗೇಲ್ ಕೂಡ ಇದೇ ವೇಳೆ, ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.

‘ಹ್ಯಾಪಿ ಬರ್ತ್‌ಡೇ ಲೆಜೆಂಡ್ ವಿರಾಟ್ ಕೊಹ್ಲಿ. ನಿಮಗೆ ಶುಭಾಶಯಗಳು. ಆರ್‌ಸಿಬಿ ತಂಡಕ್ಕಾಗಿ ಕಪ್ ಗೆದ್ದು ತವರಿಗೆ ಕೊಂಡೊಯ್ಯಿರಿ’ ಎಂದು 41 ವರ್ಷದ ಕ್ರಿಸ್ ಗೇಲ್ ಶುಭಹಾರೈಸಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡದ ಅಭಿಮಾನಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಆರ್​ಸಿಬಿ ತಂಡ ಕೊನೆಯದಾಗಿ 2016ರಲ್ಲಿ ಐಪಿಎಲ್​ ಫೈನಲ್​ಗೇರಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಾಗ ಕ್ರಿಸ್​ ಗೇಲ್​ ಕೂಡ ತಂಡದಲ್ಲಿದ್ದರು.

ಕಳೆದ 3 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿರುವ ಕ್ರಿಸ್ ಗೇಲ್, ಈ ಮುನ್ನ 2011ರಿಂದ 2017ರವರೆಗೆ ಆರ್‌ಸಿಬಿ ತಂಡದಲ್ಲಿದ್ದರು. ಈ ವೇಳೆ ಆರ್‌ಸಿಬಿ ಪರ 85 ಪಂದ್ಯ ಆಡಿದ್ದ ಗೇಲ್, 5 ಶತಕಗಳ ಸಹಿತ 3,163 ರನ್ ಸಿಡಿಸಿದ್ದರು. ಜತೆಗೆ 239 ಸಿಕ್ಸರ್ ಮತ್ತು 248 ಬೌಂಡರಿ ಕೂಡ ಸಿಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net