ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಛೋಟಾ ತೆಲಗಿ! ಹೇಗಿತ್ತು ನೋಡಿ ಈತನ ನಕಲಿ ಛಾಪಾ ಕಾಗದ ದಂಧೆ...

Chapha paper 1
Published on

ಬೆಂಗಳೂರು: ದಶಕಗಳ ಹಿಂದೆ ಕರೀಂಲಾಲಾ ತೆಲಗಿಯ ನಕಲಿ ಛಾಪಾ ಕಾಗದ ಹಗರಣ ಇಡೀ ದೇಶವನ್ನು ತಲ್ಲಣಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ತಣ್ಣಗಾಗಿದ್ದ ಈ ದಂಧೆ ಈಗ ಮತ್ತೆ ತಲೆ ಎತ್ತಿದೆ. ರಾಜ್ಯ ರಾಜಧಾನಿಯಲ್ಲಿ ನಕಲಿ ಛಾಪಾ ಕಾಗದ ದಂಧೆಕೋರರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಸಲ್ಲಿಸಲು ಈ ನಕಲಿ ಛಾಪಾ ಕಾಗದಗಳನ್ನು ಬಳಸಲಾಗುತ್ತಿತ್ತು. ಇವುಗಳನ್ನು ತಯಾರಿಸುತ್ತಿದ್ದ ಗ್ಯಾಂಗಿನ ಒಬ್ಬ ಸದಸ್ಯನ ಹೆಸರು ಛೋಟಾ ತೆಲಗಿ ಎಂದಿರುವುದು ಆಶ್ಚರ್ಯಕರ!. ಆತನ ನಿಜವಾದ ಹೆಸರು ಹುಸೇನ್ ಮೋದಿ. ಇವನೂ ಕರೀಂ ಲಾಲಾ ತೆಲಗಿಯಂತೆ ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಕಾರಣ, ಆತನ ಪರಿಚಿತರೆಲ್ಲರೂ ಆತನನ್ನು ಛೋಟಾ ತೆಲಗಿ ಎಂದೇ ಕರೆಯುತ್ತಾರೆ! ಈತನನ್ನು ಕೆಲವು ವರ್ಷಗಳ ಹಿಂದೆ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದರು. ಆದರೆ ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಕೆಲಸ ಮುಂದುವರಿಸಿದ್ದ.

ಇವನ ಗ್ಯಾಂಗ್‌ನಲ್ಲಿದ್ದ ಇನ್ನೂ ಮೂವರು ಕೂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಂದಾಯ ಭವನ ಮತ್ತು ಸಿಟಿ ಸಿವಿಲ್ ಕೋರ್ಟ್ ಬಳಿ ಟೈಪ್‌ರೈಟಿಂಗ್ ಮಾಡುತ್ತಿದ್ದ ಹರೀಶ್, ಸೀಮಾ ಅಲಿಯಾಸ್ ಷವರ್, ನಜಮಾ ಫಾತಿಮಾ ಬಂಧಿತರು. ಕರಾರು ಪತ್ರ, ಜಿಪಿಎ, ವಿಲ್ ಮತ್ತಿತರ ಕಾಗದಗಳನ್ನು ಮಾಡಿಸಿಕೊಳ್ಳಲು ನಗರದ ನ್ಯಾಯಾಲಯಗಳಿಗೆ ಮತ್ತು ಕಂದಾಯ ಭವನಕ್ಕೆ ಬರುತ್ತಿದ್ದ ಗ್ರಾಹಕರನ್ನು ಸೆಳೆಯುತ್ತಿದ್ದ ಈತನ ಗ್ಯಾಂಗ್, ಅವರಿಗೆ ಗೊತ್ತಾಗದಂತೆ ನಕಲಿ ಛಾಪಾ ಕಾಗದಗಳನ್ನು ಚಲಾವಣೆ ಮಾಡುತ್ತಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಮೋಸ ಆಗುತ್ತಿತ್ತು. ಇವರಿಂದ 400ಕ್ಕೂ ಹೆಚ್ಚು ನಕಲಿ ಛಾಪಾ ಕಾಗದಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರು ಈಗಲೇ ಸಿಕ್ಕಿಬೀಳದಿದ್ದರೆ ಇದೂ ಕೂಡ ಭವಿಷ್ಯದಲ್ಲಿ ಭಾರಿ ದೊಡ್ಡ ದಂಧೆಯಾಗಿ ಬೆಳೆಯುವ ಸಾಧ್ಯತೆ ಇತ್ತು ಎನ್ನುತ್ತಾರೆ ಪೊಲೀಸರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net