

ಚೆನ್ನೈ: ಯಾವುದೇ ಕಂಪನಿ ( Company ) ಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ. ಅದೇ ರೀತಿ ಕಂಪನಿ ಮಾಲೀಕರು ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಾರೆ. ಮಾಲೀಕ ಮತ್ತು ನೌಕರರು ವ್ಯಾಪಾರ ಕ್ಷೇತ್ರದಲ್ಲಿ ಎರಡು ರಥದ ಚಕ್ರಗಳಿದ್ದಂತೆ. ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಸರಿಯಾಗಿ ಕೆಲಸ ಮಾಡದಿದ್ದರೆ ಆ ಕಂಪನಿಯು ದಿವಾಳಿಯಾಗಲಿದೆ. ಕೆಲವು ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವವರನ್ನು ಕೇವಲ ಕಾರ್ಮಿಕರನ್ನಾಗಿ ನೋಡದೆ ಕುಟುಂಬದ ಸದಸ್ಯರಂತೆ ಪರಿಗಣಿಸುತ್ತವೆ. ತಮ್ಮ ಲಾಭದ ಒಂದು ಭಾಗವನ್ನು ನೌಕಕರಿಗೆ ಅಂತಾನೇ ಮೀಸಲಿಡುತ್ತವೆ. ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ರೂಪದಲ್ಲಿ ನೀಡುತ್ತವೆ.
ಇದೀಗ ಚೆನ್ನೈನ ಐಟಿ ಕಂಪನಿ ( Chennai company ) ಟೀಮ್ ಡೀಟೆಲಿಂಗ್ ಸಲ್ಯೂಶನ್ಸ್ ( Team Detailing Solutions ) ದೀಪಾವಳಿ ಹತ್ತಿರ ಬರುತ್ತಿದ್ದಂತೆ ತನ್ನ ಉದ್ಯೋಗಿಗಳಿಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ಅಚ್ಚರಿ ಮೂಡಿಸಿದೆ. ದುಬಾರಿ ಉಡುಗೊರೆಗಳನ್ನು ಪಡೆದ ನೌಕರರ ಮುಖದಲ್ಲಿ ಆಶ್ಚರ್ಯ ಮತ್ತು ಸಂತೋಷ ತುಂಬಿದೆ. ಈ ಸಂಸ್ಥೆಯು 2005 ರಲ್ಲಿ ಪ್ರಾರಂಭವಾಯಿತು. ಇದು ಸಾಕಷ್ಟು ಏರಿಳಿತಗಳನ್ನು ಎದುರಿಸಿ, ಇಂದು ಒಳ್ಳೆಯ ಯಶಸ್ಸು ಕಂಡಿದೆ.
ಕಂಪನಿಯ ಯಶಸ್ಸಿಗೆ ಕಾರಣರಾದ ನೌಕರರಿಗೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಕಾರು ಹಾಗೂ ಬೈಕ್‌ಗಳನ್ನು ಉಡುಗೊರೆ ನೀಡಿದೆ. 28 ಕಾರುಗಳು ಮತ್ತು 29 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಮರ್ಸಿಡಿಸ್ ಬೆಂಜ್, ಮಾರುತಿ ಸುಜುಕಿ ಮತ್ತು ಹ್ಯುಂಡೈನಂತಹ ಐಷಾರಾಮಿ ಕಾರುಗಳನ್ನು ಸಹ ಒಳಗೊಂಡಿದೆ. ದೀಪಾವಳಿ ಮುನ್ನವೇ ಕಂಪನಿಯು ನೌಕರರ ಮನ ಮತ್ತು ಮನೆ ಎರಡನ್ನು ಬೆಳಗಿಸಿದೆ. ಉಡುಗೊರೆಯಾಗಿ ಬಂದ ವಾಹನಗಳನ್ನು ನೋಡಿ ನೌಕರರು ಫುಲ್ ಖುಷಿಯಾಗಿದ್ದಾರೆ.
ಇನ್ನು ಉಡುಗೊರೆ ನೀಡಿರುವುದರಲ್ಲಿ ಕಂಪನಿಯ ಸ್ವಾರ್ಥವೂ ಸೇರಿದೆ. ಈ ರೀತಿಯ ಉಡುಗೊರೆಗಳನ್ನು ನೀಡುವುದರಿಂದ ಉದ್ಯೋಗಿಗಳಿಗೆ ಇನ್ನುಷ್ಟು ಉತ್ತೇಜನ ನೀಡಿದಂತಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಆಡಳಿತ ಮಂಡಳಿ. ಇದು ಉದ್ಯೋಗಿ ನೈತಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಕೆಲಸ ಮಾಡಲು ಅವರನ್ನು ಪ್ರೇರೇಪಿಸುತ್ತದೆ ಎಂದು ಕಂಪನಿ ಹೇಳಿದೆ.
ಉದ್ಯೋಗಿಗಳು ಕಂಪನಿಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ ಎಂದು ಟೀಮ್ ಡಿಟೇಲಿಂಗ್ ಸಲ್ಯೂಶನ್ಸ್ ಎಂಡಿ ಶ್ರೀಧರ್ ಕಣ್ಣನ್ ಹೇಳಿದ್ದಾರೆ. ಈ ಹಿಂದೆಯೂ ನೌಕರರಿಗೆ ದ್ವಿಚಕ್ರ ವಾಹನ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ 28 ಕಾರು ಹಾಗೂ 29 ಬೈಕ್‌ಗಳನ್ನು ನೀಡಲಾಗಿದೆ. ಈ ಹಿಂದೆ ತಮ್ಮ ಉದ್ಯೋಗಿಗಳಿಗೆ ಮದುವೆ ಸಮಯದಲ್ಲಿ 50 ಸಾವಿರ ನೀಡುತ್ತಿದ್ದೆವು, ಈಗ ಅದನ್ನು 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಂಪನಿಯಲ್ಲಿ ಉತ್ತಮ ಕೆಲಸದ ವಾತಾವರಣ ಮತ್ತು ಕೆಲಸದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಈ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಕಣ್ಣನ್ ಹೇಳಿದ್ದಾರೆ. (ಏಜೆನ್ಸೀಸ್)