ಮಹಾರಾಷ್ಟ್ರ ಸರ್ಕಾರದಿಂದ ಬಂಪರ್​ ಘೋಷಣೆ: ಮುಂಬೈ ಎಂಟ್ರಿಗೆ ಇನ್ಮುಂದೆ ಟೋಲ್ ಕಟ್ಟಬೇಕಿಲ್ಲ​! Eknath Shinde

Eknath Shinde
Published on

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಏಕನಾಥ್​ ಶಿಂಧೆ ( Eknath Shinde ) ಅವರು ವಾಹನ ಸವಾರರಿಗೆ ಬಂಪರ್​ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಮುಂಬೈ ಪ್ರವೇಶಿಸುವ ಲಘು ವಾಹನಗಳಿಗೆ ಯಾವುದೇ ಟೋಲ್ ( Toll )​ ಇರುವುದಿಲ್ಲ ಎಂದಿದ್ದಾರೆ.

ದಹಿಸಾರ್​, ಮುಳುನಾಡ್​, ವಾಶಿ, ಐರೋಲಿ ಮತ್ತು ತಿನ್ಹತ್ ನಾಕಾ ಈ ಐದು ಟೋಲ್​ಗಳಲ್ಲಿ ಇನ್ನು ಮುಂದೆ ಯಾವುದೇ ಟೋಲ್​ ಶುಲ್ಕವನ್ನು ಕಟ್ಟಬೇಕಾಗಿಲ್ಲ. ಇಂಥದ್ದೊಂದು ಮಹತ್ವದ ನಿರ್ಧಾರವನ್ನು ಇಂದು ನಡೆದ ಕೊನೆಯ ಸಚಿವ ಸಂಪುಟದಲ್ಲಿ ಸಿಎಂ ಏಕನಾಥ್​ ಶಿಂಧೆ ತೆಗೆದುಕೊಂಡಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದೆ.

ಮಹಾರಾಷ್ಟ್ರ ಸರ್ಕಾರದ ಕ್ರಮವು ಕಾರುಗಳು, ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಸೇರಿದಂತೆ ಲಘು ಮೋಟಾರು ವಾಹನಗಳಲ್ಲಿ (LMV ಗಳು) ವಾಣಿಜ್ಯ ನಗರ ಮುಂಬೈ ಅನ್ನು ಪ್ರವೇಶಿಸುವ ದೈನಂದಿನ ಪ್ರಯಾಣಿಕರಿಗೆ ಭಾರಿ ಪ್ರಯೋಜನವನ್ನು ನೀಡಲಿದೆ. ನಗರಕ್ಕೆ ಎಂಟ್ರಿಯಾಗುವ ಮುನ್ನ ಪ್ರಮುಖ ಟೋಲ್​ ಕೇಂದ್ರಗಳಲ್ಲಿ ಟೋಲ್ ಪಾವತಿಸುವುದರಿಂದ ಲಘು ವಾಹನ ಸವಾರರು ವಿನಾಯಿತಿ ಪಡೆಯಲಿದ್ದಾರೆ. ಇನ್ನು ಈ ಸ್ಥಳಗಳಲ್ಲಿನ ಟೋಲ್ ಬೂತ್‌ಗಳು ಮುಂಬೈನ ರಸ್ತೆ ಮೂಲಸೌಕರ್ಯದ ಮಹತ್ವದ ಭಾಗವಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಭಾರಿ ಆದಾಯ ಸಂಗ್ರಹವಾಗುತ್ತಿದೆ.

ಇಂದು ಮಧ್ಯರಾತ್ರಿಯಿಂದಲೇ ವಾಹನ ಸವಾರರು ಈ ಬೂತ್‌ಗಳಲ್ಲಿ ಟೋಲ್ ಪಾವತಿಸಬೇಕಾಗಿಲ್ಲ ಎಂದು ಸಿಎಂ ಶಿಂಧೆ ಘೋಷಿಸಿದ್ದಾರೆ. ಇದೊಂದು ಮಹತ್ವದ ನಿರ್ಧಾರವಾಗಿದೆ. ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವಾಗಲೇ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ ಪ್ರಯಾಣಿಸುವ ನಿವಾಸಿಗಳಿಗೆ ಇದು ಭಾರಿ ಪ್ರಯೋಜನ ನೀಡಲಿದೆ.

ಇನ್ನು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಗೆ ರಾಜ್ಯ ಸಚಿವ ಸಂಪುಟವು ಆಘಾತ ವ್ಯಕ್ತಪಡಿಸಿತು. ಇದೇ ಸಂದರ್ಭದಲ್ಲಿ ಮೃತರ ಸಾವಿಗೆ ಸಂತಾಪವನ್ನು ಸೂಚಿಸಿತು. ಇದರ ಜೊತೆಗೆ ರಾಜ್ಯ ಸರ್ಕಾರವು ಮಹಾರಾಷ್ಟ್ರ ರಾಜ್ಯ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯವನ್ನು "ರತನ್ ಟಾಟಾ ಮಹಾರಾಷ್ಟ್ರ ರಾಜ್ಯ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ" ಎಂದು ಮರುನಾಮಕರಣ ಮಾಡಲು ನಿರ್ಧರಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net