

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ದ್ವೇಷವೇ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಗೆ ಪ್ರಮುಖ ಕಾರಣವಾಗಿದೆ. ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಘಟನೆಯಿಂದಾಗಿ ಮುಂಬೈ ಜನರಲ್ಲಿ ಆತಂಕ ಮನೆ ಮಾಡಿದೆ. ಮಾಜಿ ಸಚಿವರನ್ನೇ ಬರ್ಬರವಾಗಿ ಹತ್ಯೆ ಮಾಡಿರುವಾಗ ಸಾಮಾನ್ಯ ಜನರ ಗತಿ ಏನು ಎಂದು ಚಿಂತಿಸುತ್ತಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ಸದಸ್ಯನೊಬ್ಬ ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್ ಪ್ರಕಾರ, ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರೊಂದಿಗಿನ ಆತ್ಮೀಯತೆ ಮತ್ತು ದಾವೂದ್ ಇಬ್ರಾಹಿಂನಂತಹ ಅಂಡರ್ವರ್ಲ್ಡ್ ಡಾನ್ನೊಂದಿಗಿನ ಒಡನಾಟವೇ ಸಿದ್ದಿಕಿ ಹತ್ಯೆಗೆ ಕಾರಣ ಎಂದಿದ್ದಾರೆ. ಸಿದ್ದಿಕಿ ಅವರ ಪುತ್ರ ಹಾಗೂ ಬಾಂದ್ರಾದ ಹಾಲಿ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿ ಎದುರು ಶನಿವಾರ (ಅ.12) ರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸಿದ್ದಿಕಿ ಅವರು ಬಾಲಿವುಡ್ ಮತ್ತು ರಾಜಕಾರಣದಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರು.
ಸಿದ್ದಿಕಿ ಈ ಹಿಂದೆ ಬಾಲಿವುಡ್ ತಾರೆಯರೊಂದಿಗೆ ಇಫ್ತಾರ್ ಕೂಟಗಳನ್ನೂ ಆಯೋಜಿಸಿದ್ದರು. ಹಾಗಾಗಿ ಅವರಿಗೆ ‘ಬಾದ್ರಾ ಹುಡುಗ’ ಎಂಬ ಹೆಸರು ಬಂತು. ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ( Shah Rukh - Salman ) ನಡುವಿನ ವರ್ಷಗಳ ದ್ವೇಷವನ್ನು ಬಾಬಾ ಸಿದ್ದಿಕಿ ಮಧ್ಯಸ್ಥಿಕೆಯ ಮೂಲಕ ಪರಿಹರಿಸಲಾಯಿತು. ಇಫ್ತಾರ್ ಕೂಟದ ಮೂಲಕ ಐದು ವರ್ಷಗಳ ಜಗಳವನ್ನು ಸಿದ್ದಿಕಿ ಕೊನೆಗೊಳಿಸಿದರು.
2008ರ ಜುಲೈ 17ರಂದು ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಸಲ್ಮಾನ್ ಅವರ ಮಾಜಿ ಗೆಳತಿ ಐಶ್ವರ್ಯಾ ರೈ ಬಗ್ಗೆ ಶಾರುಖ್ ಮಾಡಿದ ಕಾಮೆಂಟ್ ಭಾರಿ ವಾಗ್ವಾದಕ್ಕೆ ಕಾರಣವಾಗಿತ್ತಂತೆ. ಆ ನಂತರ ಇಬ್ಬರೂ ದೂರವಾಗಿದ್ದರು ಮತ್ತು ಒಟ್ಟಿಗೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ. ಇದೇ ರೀತಿ ಇಬ್ಬರ ನಡುವಿನ ಮನಸ್ತಾಪ ಐದು ವರ್ಷಗಳ ಕಾಲ ಮುಂದುವರಿಯಿತು. 2013ರಲ್ಲಿ ಬಾಬಾ ಸಿದ್ದಿಕಿಯ ಪ್ಲಾನ್ ಮೂಲಕ ಇಬ್ಬರನ್ನು ಇಫ್ತಾರ್ ಕೂಟದಲ್ಲಿ ಭಾಗವಹಿಸುವಂತೆ ಮಾಡಿ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿದರು. ಸಿದ್ದಿಕಿ ಆಯೋಜಿಸಿದ್ದ ಇಫ್ತಾರ್ನಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಪಕ್ಕದಲ್ಲಿ ಶಾರುಖ್ ಖಾನ್ ಕುಳಿತಿದ್ದರು.
ಸಲ್ಮಾನ್ ಮತ್ತು ಶಾರುಖ್ ಅವರನ್ನು ಖುದ್ದಾಗಿ ಭೇಟಿ ಮಾಡುವುದು ಸಿದ್ದಿಕಿಯ ಯೋಜನೆಯಾಗಿತ್ತು. ಒಬ್ಬರನ್ನೊಬ್ಬರು ನೋಡಿದ ನಂತರ ಇಬ್ಬರು ಸ್ಟಾರ್ಗಳು ಪರಸ್ಪರ ತಬ್ಬಿಕೊಂಡು ತಮ್ಮ ದ್ವೇಷವನ್ನು ಕೊನೆಗೊಳಿಸಿದರು. ಬಾಬಾ ಸಿದ್ದಿಕಿ ಮಾತಿಗೆ ಬಾಲಿವುಡ್ನಲ್ಲೂ ತುಂಬಾ ಗೌರವ ಇತ್ತು. ಇನ್ನು ಬಾಬಾ ಸಿದ್ದಿಕಿ ಅವರ ಸಾವಿನ ಸುದ್ದಿ ಕೇಳಿ ಬಾಲಿವುಡ್ ಸೆಲೆಬ್ರಿಟಿಗಳು ಆಸ್ಪತ್ರೆಗೆ ದೌಡಾಯಿಸಿದರು. ಬಿಗ್ ಬಾಸ್ ಶೂಟಿಂಗ್ ನಿಲ್ಲಿಸಿ ಸಲ್ಮಾನ್ ಖಾನ್ ಬಂದರು. ನಟಿ ಶಿಲ್ಪಾ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಕಣ್ಣೀರು ಹಾಕಿದರು. (ಏಜೆನ್ಸೀಸ್)