

ನವದೆಹಲಿ: ಏಷ್ಯಾದ ಅತಿದೊಡ್ಡ ಬಿಲಿಯನೇರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ( Mukesh Ambani ) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ. ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಈ ಮದುವೆಯನ್ನು ತಿರುಗಿ ನೋಡಿತು. ಈ ಮದುವೆಗೆ ಅಂಬಾನಿ ಕುಟುಂಬ 5000 ಕೋಟಿ ರೂ. ಖರ್ಚು ಮಾಡಿದೆ. ಈ ಹಣವು ಅವರ ಆಸ್ತಿ ಮೌಲ್ಯದ ಶೇ. 0.5 ರಷ್ಟು ಮಾತ್ರ ಎಂಬುದೇ ಅಚ್ಚರಿಯ ಸಂಗತಿ.
ಇನ್ನು ಆಂಟಿಲಿಯಾ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಐಷಾರಾಮಿ ಮನೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದು ವಿಶ್ವದ ಅತ್ಯಂತ ದುಬಾರಿ ನಿವಾಸಗಳಲ್ಲಿ ಒಂದಾಗಿದೆ. ಈ 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಯಾವ ಮಹಡಿಯಲ್ಲಿ ವಾಸಿಸುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ? ಬಹುತೇಕರಿಗೆ ಗೊತ್ತಿಲ್ಲ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಅಂದಹಾಗೆ ಆಂಟಿಲಿಯಾವನ್ನು ನಾಲ್ಕು ಲಕ್ಷ ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾಣ ವೆಚ್ಚ 15,000 ಕೋಟಿ ರೂಪಾಯಿ! ಆಂಟಿಲಿಯಾವನ್ನು ಅಮೆರಿಕನ್ ಸಂಸ್ಥೆಗಳಾದ ಪರ್ಕಿನ್ಸ್ & ವಿಲ್ ಮತ್ತು ಹಿಚ್ ಬೆಡ್ನಾರ್ ಅಸೋಸಿಯೇಟ್ಸ್ ನಿರ್ಮಿಸಿದೆ. 2008ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. ಕೇವಲ ಎರಡೇ ವರ್ಷದಲ್ಲಿ ಪೂರ್ಣಗೊಂಡಿತು. ಆಂಟಿಲಿಯಾ ಕಟ್ಟಡದ ಎತ್ತರ 173 ಮೀಟರ್. ಅಟ್ಲಾಂಟಿಕ್ ಸಾಗರದಲ್ಲಿರುವ ಪೌರಾಣಿಕ ದ್ವೀಪದ ಹೆಸರನ್ನೇ ಅಂಬಾನಿ ತಮ್ಮ ನಿವಾಸಕ್ಕೆ ಇಟ್ಟರು. ಇದು ಕೇವಲ ಮನೆ ಮಾತ್ರವಲ್ಲದೆ ಜಾಗತಿಕ ಗಮನ ಸೆಳೆದ ಕಟ್ಟಡವೂ ಹೌದು.
ಮೂರು ಹೆಲಿಪ್ಯಾಡ್‌ಗಳು, ಬಹುಮಹಡಿ ಕಾರ್ ಪಾರ್ಕಿಂಗ್ ಮತ್ತು ಮೂರು ಹೈಸ್ಪೀಡ್ ಎಲಿವೇಟರ್‌ಗಳು ಆಂಟಿಲಿಯಾದ ಕೆಲವು ವೈಶಿಷ್ಟ್ಯಗಳಾಗಿವೆ. ರಿಕ್ಟರ್ ಮಾಪಕದಲ್ಲಿ 8.0 ತೀವ್ರತೆಯ ಭೂಕಂಪವನ್ನು ಸಹ ಆಂಟಿಲಿಯಾ ತಡೆದುಕೊಳ್ಳಬಲ್ಲದು.
ಅಂಬಾನಿ ಕುಟುಂಬ ಆಂಟಿಲಿಯಾದ 27ನೇ ಮಹಡಿಯಲ್ಲಿ ವಾಸಿಸುತ್ತಿದೆ. 25 ಮಹಡಿಗಳಲ್ಲಿ ಜನವಸತಿಯಿಲ್ಲ. ಮುಕೇಶ್ ಅಂಬಾನಿ ಅವರ ಇಬ್ಬರು ಪುತ್ರರು ಮತ್ತು ಕುಟುಂಬವು 27ನೇ ಮಹಡಿಯಲ್ಲಿ ವಾಸಿಸುತ್ತಿದೆ. ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸಿಸುವ ನಿರ್ಧಾರವು ಮನೆಯ ಮುಖ್ಯಸ್ಥರಾದ ನೀತಾ ಅಂಬಾನಿಯವರದ್ದಾಗಿದೆ.
ಪ್ರತಿಯೊಂದು ಕೋಣೆಯೂ ನೈಸರ್ಗಿಕ ಗಾಳಿ ಮತ್ತು ಬೆಳಕನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮೇಲಿನ ಮಹಡಿಯಲ್ಲಿ ವಾಸಿಸಲು ನಿರ್ಧರಿಸಿದ್ದೇನೆ ಎಂದು ನೀತಾ ಅಂಬಾನಿ ಈ ಹಿಂದಿನ ಕೆಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಐಷಾರಾಮಿಯ ಜತೆಗೆ ನೆಮ್ಮದಿಗೂ ಪ್ರಾಮುಖ್ಯತೆ ನೀಡಿ ನೀತಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅಂಬಾನಿ ಕುಟುಂಬ ವಾಸವಾಗಿರುವ 27ನೇ ಮಹಡಿಗೆ ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂಬ ವರದಿಗಳೂ ಇವೆ. (ಏಜೆನ್ಸೀಸ್)