

ನವದೆಹಲಿ: ಶುಕ್ರವಾರ (ಡಿ.13) ನಡೆದ ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹರಿದು, ಹೊತ್ತೊಯ್ದ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳ ರಂಪಾಟ ಪರೀಕ್ಷಾ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಪ್ರಶ್ನೆ ಪತ್ರಿಕೆ ಹಂಚಿಕೆಯಲ್ಲಿ 40ರಿಂದ 45 ನಿಮಿಷಗಳ ವಿಳಂಬಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಕೆಲವು ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದೊಳಗೆ ದೊಡ್ಡ ಗಲಿಬಿಲಿಯನ್ನೇ ಸೃಷ್ಟಿಸಿದ್ದರು.
ಅಧಿಕಾರಿಗಳು ಸಲ್ಲಿಸಿರುವ ಪೊಲೀಸ್ ದೂರಿನ ಪ್ರಕಾರ, ಪರೀಕ್ಷೆಯ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು 40ರಿಂದ 45 ನಿಮಿಷ ತಡವಾಗಿ ಹಸ್ತಾಂತರಿಸಿದ್ದಾರೆ. ಈ ವಿಳಂಬಕ್ಕೆ ಪರ್ಯಾಯವಾಗಿ ನಾವು 45 ನಿಮಿಷ ತಡವಾಗಿ ಉತ್ತರ ಪತ್ರಿಕೆಯನ್ನು ಪಡೆಯುತ್ತೇವೆ. ಅಭ್ಯರ್ಥಿಗಳು ನಿರಾಳವಾಗಿ ನಿಗದಿಪಡಿಸಿದ ಸಮಯಕ್ಕೆ ಅನುಗುಣವಾಗಿ ಪರೀಕ್ಷೆ ಎದುರಿಸಿ ಎಂದಿದ್ದರು. ಈ ಮಾತುಗಳನ್ನು ಕೇಳಿದರೂ ಸಹ ಕೆಲವರು ಪ್ರಶ್ನೆ ಪತ್ರಿಕೆ ಹರಿದು, ರಂಪಾಟಕ್ಕೆ ಕಾರಣರಾಗಿದ್ದಾರೆ.
ಕೊಠಡಿಗೆ ನುಗ್ಗಿದ ಅಭ್ಯರ್ಥಿಗಳ ಗುಂಪು, ಅಧಿಕಾರಿಗಳನ್ನು ಪಕ್ಕಕ್ಕೆ ತಳ್ಳಿ, ಪ್ರಶ್ನೆ ಪತ್ರಿಕೆಗಳಿದ್ದ ಬಾಕ್ಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಅವರಲ್ಲಿ ಕೆಲವರು ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕಿದರೆ, ಇನ್ನೂ ಕೆಲವರು ಅದನ್ನು ಕೈಯಲ್ಲಿಡಿದು ಬೆಂಚ್ ಹತ್ತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ಸಾಕ್ಷಿ ಮುಂದಿಟ್ಟು ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.
ಕೊಠಡಿಯಲ್ಲಿ ಸೀಲ್ ಮಾಡಿದ್ದ ಪೆಟ್ಟಿಗೆಯನ್ನು ಆಯಾ ಕೊಠಡಿಯಲ್ಲಿ ಏಕೆ ತೆರೆಯಲಿಲ್ಲ ಎಂದು ಕಿರುಚಾಡಿದ ಅಭ್ಯರ್ಥಿಗಳ ಜತೆಗೆ ಇತರೆ ಕೊಠಡಿಗಳಲ್ಲಿದ್ದ ಕೆಲವು ವಿದ್ಯಾರ್ಥಿಗಳು ಓಡಿ ಬಂದು ಬುಕ್‌ಲೆಟ್‌ಗಳು ಮತ್ತು ಹಾಜರಾತಿ ಹಾಳೆಗಳನ್ನು ಕಸಿದುಕೊಂಡು ಹರಿದು ಬಿಸಾಡಿದ್ದಾರೆ. ಅಸಲಿಗೆ ಇದಕ್ಕೆಲ್ಲ ಕಾರಣ ಹಬ್ಬಿಸಲಾದ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಎಂದು ಅಧಿಕಾರಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).