ವಿದ್ಯೆಗೆ ತೊಡಕು, ಹಣಕ್ಕೆ ಬಿಕ್ಕಟ್ಟು! ತಾಯಿಯೇ ಮೂಲ ಆಧಾರ: ವಿಶ್ವ ಚೆಸ್​ ಚಾಂಪಿಯನ್​ ಗುಕೇಶ್ ಕುಟುಂಬ​ ಪಟ್ಟ ಕಷ್ಟ ಅಷ್ಟಿಷ್ಟಲ್ಲ | Gukesh

ವಿಜಯವಾಣಿ - 2024-12-14T213358.491
Published on

ನವದೆಹಲಿ: ಭಾರತದ ಚದುರಂಗದ ಚತುರ ದೊಮ್ಮರಾಜು ಗುಕೇಶ್ (Gukesh)​ ಈಗ ಜಾಗತಿಕ ಚೆಸ್​ ಮಾಸ್ಟರ್​ ಆಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 18 ವರ್ಷದ ಗ್ರಾಂಡ್​ ಮಾಸ್ಟರ್​ ಡಿ. ಗುಕೇಶ್​ ವಿಶ್ವ ಚೆಸ್​ ಚಾಂಪಿಯನ್​ ಪಟ್ಟವೇರಿದ ಅತಿ ಕಿರಿಯ ಆಟಗಾರ ಮತ್ತು ಎರಡನೇ ಭಾರತೀಯರೆಂಬ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ವಿಶ್ವ ಚೆಸ್​ನಲ್ಲಿ ಭಾರತದ ಪ್ರಾಬಲ್ಯವನ್ನು ಮರುಸ್ಥಾಪಿಸಿದ್ದಾರೆ. ಗುಕೇಶ್​ 18ನೇ ವಯಸ್ಸಿನಲ್ಲೇ ವಿಶ್ವದ ವರ್ಲ್ಡ್​ ಚಾಂಪಿಯನ್​ ಆದ ಸಾಧನೆ ಎಷ್ಟು ಅಪಾರವೋ, ಅಸಲಿಗೆ ಅವರ ಸಾಧನೆ ಹಿಂದಿರುವ ನೋವು, ಕಣ್ಣೀರು ಅಷ್ಟೇ ಅಪಾರ.

ವಿದ್ಯಾಭ್ಯಾಸಕ್ಕೆ ತೊಡಕು

"ನಾನು 7ನೇ ವಯಸ್ಸಿನಲ್ಲಿದ್ದಾಗಲೇ ಚೆಸ್ ಪ್ರಯಾಣ ಆರಂಭಿಸಿದೆ. ಇಂದು ಈ ಕ್ಷಣದ ಬಗ್ಗೆ ಅಂದಿನಿಂದಲೇ ದೊಡ್ಡ ಕನಸು ಕಾಣುತ್ತಿದ್ದೆ. ವಿಶ್ವ ಚದುರಂಗ ಚಾಂಪಿಯನ್ ಆಗಿ ಹೊರಹೊಮ್ಮುವ ಕನಸು ನನ್ನ ಪೋಷಕರದ್ದಾಗಿತ್ತು ಎಂದು ಗೆಲುವಿನ ಬೆನ್ನಲ್ಲೇ ಗುಕೇಶ್ ತಮ್ಮ ​ಮನದಾಳದ ಮಾತನ್ನು ಹಂಚಿಕೊಂಡರು.

ಕೆಲಸ ಬಿಟ್ಟ ತಂದೆ, ತಾಯಿಯ ಆದಾಯವೇ ಮೂಲ

ಮಗ​ ಚದುರಂಗದ ಅಧಿಪತಿ ಆಗಬೇಕೆಂಬ ಕನಸು ಹೊತ್ತಿದ್ದ ಗುಕೇಶ್​ ತಂದೆ, ಚೆಸ್​ ಕಲಿಕೆಗಾಗಿ ಮಗನನ್ನು ವಿದೇಶಗಳಿಗೆ ಕರೆದೊಯ್ಯಲು ಅವರ ಜತೆಗಿರುವ ಅನಿವಾರ್ಯತೆ ಇತ್ತು. ಹೀಗಾಗಿ ಪದೇ ಪದೇ ಪ್ರಯಾಣ ಅಷ್ಟು ಸುಲಭದ ಮಾತಾಗಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಗುಕೇಶ್​ ತಂದೆ ರಜನಿಕಾಂತ್ ತಮ್ಮ ವೈದ್ಯ ವೃತ್ತಿಗೆ ಗುಡ್​ಬೈ ಹೇಳಿ, ಮಗನ ಪ್ರಯಾಣದಲ್ಲಿ ಭಾಗಿಯಾದರು. ಅತ್ತ ಮೈಕ್ರೋಬಯಾಲಜಿಸ್ಟ್ ಆದ ತಾಯಿ ಪದ್ಮಾ ಅವರು, ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು, ಆದಾಯಕ್ಕೆ ಶಕ್ತಿಯಾದರು.

ಶ್ರೀಮಂತ ಕುಟುಂಬ ನಮ್ಮದಲ್ಲ

"ನಮ್ಮದು ತುಂಬಾ ಶ್ರೀಮಂತ ಕುಟುಂಬವಾಗಿರಲಿಲ್ಲ, ಆದ್ದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಚಿಕ್ಕ ವಯಸ್ಸಿನಲ್ಲಿ ಇದೆಲ್ಲವೂ ನನಗೆ ತಿಳಿದಿರಲಿಲ್ಲ. 2017 ಮತ್ತು 2018ರ ಸಮಯದಲ್ಲಿ ನನ್ನ ಹೆತ್ತವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು. ಈ ವೇಳೆ ಪೋಷಕರಿಗೆ ಯಾವುದೇ ರೀತಿಯಲ್ಲೂ ಹಣ ವ್ಯಯಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನನ್ನ ಸ್ನೇಹಿತರೇ ನನಗೆ ಟೂರ್ನಮೆಂಟ್‌ಗಳನ್ನು ಆಡಲು ಹಲವು ರೀತಿ ಸಹಾಯ ಕೋರಿದ್ದಾರೆ" ಎಂದು ಗುಕೇಶ್​ ವಿವರಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net