

ಬೆಂಗಳೂರು: ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ (ಕೆಟಿಟಿಎ) ಆಯೋಜಿಸಿರುವ ರಾಷ್ಟ್ರ ಮಟ್ಟದ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಚಾಲನೆ ಕಂಡಿತು.
ಕರ್ನಾಟಕ, ಮಹಾರಾಷ್ಟ್ರ ಸೇರಿ ದೇಶದ 29 ರಾಜ್ಯಗಳ ಒಟ್ಟು 1,690ಕ್ಕೂ ಅಧಿಕ ಸಂಖ್ಯೆಯ ಕ್ರೀಡಾಪಟುಗಳು ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾರೆ. ಈ ಪ್ರತಿಷ್ಠಿತ ಪಂದ್ಯಾವಳಿಗೆ ಕೆಟಿಟಿಎ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಶಾಸಕ ರಿಜ್ವಾನ್ ಹರ್ಷದ್ ಟೇಬಲ್ ಟೆನಿಸ್ ಆಟ ಆಡುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಿಜ್ವಾನ್ ಹರ್ಷದ್, ಕ್ರೀಡೆ ಯುವ ಸಮೂಹದ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದ್ದು, ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಪೂರಕವಾಗಿದೆ. ಟೇಬಲ್ ಟೆನ್ನಿಸ್ ಪ್ರಮುಖ ಕ್ರೀಡೆಯಾಗಿದ್ದು, ಇದರಿಂದ ದೇಹಕ್ಕೆ ವ್ಯಾಯಾಮ ದೊರೆತು ಕ್ಷಮತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಏಕಾಗ್ರತೆಯ ಪ್ರತೀಕವಾಗಿರುವ ಟೇಬಲ್ ಟೆನ್ನಿಸ್ ಕ್ರೀಡೆಯನ್ನು ರಾಜ್ಯದಲ್ಲಿ ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯುವ ಪ್ರಯತ್ನ ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಚಾಂಪಿಯನ್ಶಿಪ್ ಈ ತಿಂಗಳ 22ರವರೆಗೆ ನಡೆಯಲಿದ್ದು, ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ವಿವಿಧ ವಯೋಮಾನದಡಿ ಪಂದ್ಯಗಳು ಜರುಗಲಿವೆ.