

ಭೋಪಾಲ್: ಎರಡು ಹೈ ಸ್ಪೀಡ್ ರೈಲುಗಳು ಒಂದೇ ಸಮಯದಲ್ಲಿ ಕ್ರಾಸಿಂಗ್ ಮಾಡಿದ್ದರಿಂದಾಗಿ ರೈಲ್ವೆ ನಿಲ್ದಾಣವೇ ಮುರಿದುಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಚಾಂದ್ನಿ ರೈಲ್ವೆ ನಿಲ್ದಾಣ ಬುಧವಾರ ಸಂಜೆ ಬಿದ್ದಿದೆ. ಈ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಅನೇಕ ರೈಲುಗಳು ಸಂಚರಿಸುತ್ತವೆ. ಅಷ್ಟೊಂದು ಪ್ರಮುಖ ನಿಲ್ದಾಣವಲ್ಲವಾದ್ದರಿಂದ ಹೈ ಸ್ಪೀಡ್ ರೈಲುಗಳು ಇಲ್ಲಿ ನಿಲ್ಲುವುದಿಲ್ಲವಂತೆ. ಅದೇ ರೀತಿ ಬುಧವಾರ ಕೂಡ ಹೈ ಸ್ಪೀಡ್ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲದೆಯೇ ಸಂಚರಿಸಿವೆ. ಮಧ್ಯಾಹ್ನ 3.30ರ ಸಮಯಕ್ಕೆ ಖಾಂಡ್ವಾ ಇಂದ ಬರುವ ಪವನ್ ಎಕ್ಸ್ಪ್ರೆಸ್ ಮತ್ತು ಬರ್ಹನ್ಪುರ್ನಿಂದ ಬರುವ ಗುವಾಹಾಟಿ ಎಕ್ಸ್ಪ್ರೆಸ್ ರೈಲುಗಳು ಒಂದೇ ಸಮಯದಲ್ಲಿ ಈ ನಿಲ್ದಾಣವನ್ನು ಹಾದು ಹೋಗಿವೆ.
ಎರಡು ಹೈ ಸ್ಪೀಡ್ ರೈಲುಗಳು ಒಂದೇ ಸಮಯದಲ್ಲಿ ಹಾದು ಹೋಗಿದ್ದರಿಂದಾಗಿ ನಿಲ್ದಾಣದ ಗೋಡೆಗಳು ಕುಸಿದಿವೆ. ಮಧ್ಯಾಹ್ನ 3.55ರ ಸಮಯಕ್ಕೆ ಗೋಡೆ ಕುಸಿದಿರುವುದಾಗಿ ತಿಳಿಸಲಾಗಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ನಿಲ್ದಾಣದಲ್ಲಿ ಸಿಬ್ಬಂದಿ ಬಿಟ್ಟು ಬೇರಾರು ಇರಲಿಲ್ಲ ಎನ್ನಲಾಗಿದೆ. ಸಿಬ್ಬಂದಿಯೂ ಕೂಡ ನಿಲ್ದಾಣದಿಂದ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್)