

ಬೆಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಇಂಟರಾಕ್ಟೀವ್ ಫೋರಮ್ ಆನ್ ಇಂಡಿಯನ್ ಎಕಾನಮಿ (ಐಎಫ್ಐಇ)ಯಿಂದ ವಿಜ್ಞಾನಿ ಡಾ. ಸಿ.ಎನ್.ಆರ್.ರಾವ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಸೇರಿ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ‘ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾರತ್ತಹಳ್ಳಿಯ ಹೊರ ವರ್ತಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಕಲೆ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಸಿನಿಮಾ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೂ ಆಗಿರುವ ಪ್ರಶಸ್ತಿ ಆಯ್ಕೆ ಸಮಿತಿ ಉಪಾಧ್ಯಕ್ಷ ಕೆ.ಜಿ. ಬಾಲಕೃಷ್ಣನ್ ಮತ್ತು ವೇದಿಕೆ ಅಧ್ಯಕ್ಷ ನ್ಯಾ. ಜ್ಞಾನ್ ಸುಧಾ ಮಿಶ್ರಾ ಅವರು ಗಣ್ಯರನ್ನು ಸನ್ಮಾನಿಸಿದರು.
ಮಾನವೀಯ ಸೇವೆ ಮಾಡುವವರೇ ಸ್ಪೂರ್ತಿ: ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ರಾಜ್ಯಪಾಲರು, ‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ’ ಎಂಬ ಮನೋಭಾವದಿಂದ ಮಾನವ ಸೇವೆ, ಸಮಾಜ ಸೇವೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕೆಲಸ ಮಾಡುವವರೇ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಸ್ಥಾನ, ಪ್ರತಿಷ್ಠೆ ಅಥವಾ ದುರಾಸೆಯನ್ನು ಬಯಸದೆ. ಇತರರ ಹಿತಾಸಕ್ತಿಗಳನ್ನು ಗೌರವಿಸುವ ವ್ಯಕ್ತಿ ಉತ್ತಮ ಸಮಾಜ ನಿರ್ವಣಕ್ಕೆ ಸ್ಪೂರ್ತಿಯಾಗುತ್ತಾರೆ ಎಂದು ತಿಳಿಸಿದರು.
ಬದಲಾವಣೆಯು ಪ್ರಕೃತಿಯ ನಿಯಮವಾಗಿದೆ ಮತ್ತು ಸಕಾರಾತ್ಮಕ ಬೆಳವಣಿಗೆಗಾಗಿ ಬದಲಾವಣೆಯು ಸಂಭವಿಸುತ್ತಲೇ ಇರಬೇಕು. ತಮ್ಮ ಪ್ರಯತ್ನದ ಮೂಲಕ ಸಮಾಜದಲ್ಲಿ ಮಹತ್ವದ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾದ ಕರ್ನಾಟಕದ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಅವಕಾಶ ನನಗೆ ಸಿಕ್ಕಿದೆ. ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವುದನ್ನು ಮುಂದುವರೆಸಬೇಕು ಎಂದು ಆಶಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ‘ಚಾಂಪಿಯನ್ಸ್ ಆಫ್ ಚೇಂಜ್’ ಪ್ರಶಸ್ತಿ ಸಂಸ್ಥಾಪಕ ನಂದನ್ ಝಾ, ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಗಳ ಪೋಷಕ ಶ್ಯಾಮ್ ಜಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾಜ ಸೇವೆ: ಮಾಜಿ ಸಿಎಂ ಎಸ್.ಎಂ. ಕೃಷ್ಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಪರಿಸರವಾದಿ ತುಳಸಿಗೌಡ, ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ಸಂಸದ ತೇಜಸ್ವಿ ಸೂರ್ಯ, ಚಿತ್ರ ನಟಿ ಖುಷ್ಬೂ ಯಾದವ್, ಉದ್ಯಮಿಗಳಾದ ಬಿಪಿನ್ ದಯಾಳ್, ಮಯಾಂಕ್ ಗೋಯಲ್, ಉಪೇಂದ್ರ ರಾವ್ ಕೊಳ್ಳು, ಬಿಪಿನ್ ಚಂದ್ರ, ಡಾ. ಸೋಮದತ್ತ ಸಿಂಗ್ ಮತ್ತು ರಾಜೇಶ್ ರೆಡ್ಡಿ ಶಿವಶಂಕರ್.
ಸಂಸ್ಕೃತಿ: ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ನಟರಾದ ಡಾ. ವಿಷ್ಣುವರ್ಧನ್ (ಮರಣೋತ್ತರ), ಉಪೇಂದ್ರ, ಡಾ. ವಿ. ರವಿಚಂದ್ರನ್.
ವಿಜ್ಞಾನ ಮತ್ತು ನಾವೀನ್ಯತೆ: ವಿಜ್ಞಾನಿ ಸಿಎನ್ಆರ್ ರಾವ್, ನಿಖಿಲ್ ಪಾಲ್
ಆವಿಷ್ಕಾರ ಮತ್ತು ಕೌಶಲ ಅಭಿವೃದ್ಧಿ: ಪೃಥ್ವಿರಾಜ್ ಸಿಂಗ್
ಆರೋಗ್ಯ: ಡಾ. ರಾಜಾ ವಿಜಯ್ ಕುಮಾರ್, ಡಾ. ಡೈಸಿ ಬಾಗ್ಚಿ.
ಸಾಮಾಜಿಕ ಕಾರ್ಯಕರ್ತ: ಬಿ. ರಾಮಚಂದ್ರ
ಕ್ರೀಡೆ: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ರಾಜೇಶ್ವರಿ ಗಾಯಕ್ವಾಡ್, ಸೋಮಜೀತ್ ಸಿಂಗ್