ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

PM Modi
Published on

ತೆಲಂಗಾಣ: ದೇಶದಲ್ಲಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಸಲ ಜಾತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸಿವೆ. ಹೀಗಾಗಿಯೇ ಜಾತಿಕೇಂದ್ರಿತ ಲೆಕ್ಕಚಾರಗಳು ದೊಡ್ಡಮಟ್ಟದಲ್ಲಿ ನಡೆಯತ್ತಿದ್ದು, ಇದೀಗ ಪ್ರಧಾನಿ ಮೋದಿ ಕೂಡ ಜಾತಿ ದಾಳ ಉರುಳಿಸಿದ್ದಾರೆ.

ದೇಶದಲ್ಲಿ ಜಾತಿಗಣತಿ ದೊಡ್ಡ ಸದ್ದು ಮಾಡುತ್ತಿದ್ದು, ಎಲ್ಲ ವಿಷಯದಲ್ಲಿ ಜಾತಿಯ ವಿಚಾರಗಳು ಅನುರಣಿಸುತ್ತಿವೆ. ಅದರಲ್ಲೂ ಈ ಸಲ 'ಇತರ ಹಿಂದುಳಿದ ವರ್ಗ'(ಒಬಿಸಿ)ದವರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್​-ಬಿಜೆಪಿ ಎರಡೂ ಗಮನ ಹರಿಸಿವೆ. ಇದೇ ಲೆಕ್ಕಾಚಾರದಲ್ಲಿ ಇಂದು ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ.

ಹೈದರಾಬಾದ್​ನ ಎಲ್​.ಬಿ.ಸ್ಟೇಡಿಯಮ್​ಲ್ಲಿ ಇಂದು ನಡೆದ 'ಒಬಿಸಿ ಆತ್ಮಗೌರವ ಸಭೆ' ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2013ರಲ್ಲಿ ದೇಶದ ಮೊದಲ ಒಬಿಸಿ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಇಲ್ಲೇ ಬುನಾದಿ ಹಾಕಲಾಗಿತ್ತು ಎಂದು ಸ್ಮರಿಸಿಕೊಂಡರು.

ಈ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಲಾಗುವುದು. ಒಬಿಸಿ ವರ್ಗದವರನ್ನು ರಾಜಕೀಯವಾಗಿ ಸಬಲಗೊಳಿಸುವುದೇನಿದ್ದರೂ ಬಿಜೆಪಿ ಮಾತ್ರ ಎಂದೂ ಪ್ರಧಾನಿ ಮೋದಿ ಹೇಳಿದರು.

ಪಂಚರಾಜ್ಯಗಳ ಚುನಾವಣೆ ಪೈಕಿ ಇಂದು ಮಿಜೋರಾಂ ಮತ್ತು ಛತ್ತೀಸ್​ಗಢದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ, ಛತ್ತೀಸ್​ಗಢದ 20 ಸೀಟುಗಳಿಗೆ ಮೊದಲ ಹಂತದ ಮತದಾನ ಜರುಗಲಿದೆ. ಛತ್ತೀಸ್​ಗಢದ ಉಳಿದ 70 ಸ್ಥಾನಗಳಿಗೆ ನ.17ರಂದು ಚುನಾವಣೆ ನಡೆಯಲಿದೆ.

ಅದೇ ದಿನ ಮಧ್ಯಪ್ರದೇಶದ ಎಲ್ಲ 230 ಸ್ಥಾನಗಳಿಗೆ ಮತದಾನ ಆಗಲಿದೆ. 200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ನ. 23 ಮತ್ತು 119 ಕ್ಷೇತ್ರಗಳುಳ್ಳ ತೆಲಂಗಾಣದಲ್ಲಿ ನ. 30ಕ್ಕೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಇಂದು ಹೈದರಾಬಾದ್​ನಲ್ಲಿ ಜಾತಿ ದಾಳ ಉರುಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net