ಕೇಂದ್ರದ ಸಂಧಾನ ಸೂತ್ರ ರೈತ ಸಂಘಟನೆಗಳಿಂದ ತಿರಸ್ಕಾರ

Farmers Protest
Published on

ನವದೆಹಲಿ: ‘ದೆಹಲಿ ಚಲೋ’ ಹೆಸರಿನಲ್ಲಿ ವಿವಿಧ ರಾಜ್ಯಗಳ ರೈತರಿಂದ ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಸಂಧಾನಸೂತ್ರವೊಂದು ಹೊರಬಿದ್ದರೂ ರೈತ ನಾಯಕರು ಇದನ್ನು ಒಪ್ಪದೆ, ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಪರಿಣಾಮವಾಗಿ, ಕಳೆದ ಮಂಗಳವಾರದಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿದಿದೆ.

ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್, ನಿತ್ಯಾನಂದ ರೈ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಭಾನುವಾರ ರಾತ್ರಿ ಚಂಡೀಗಢದಲ್ಲಿ ರೈತ ನಾಯಕರ ಜತೆ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಭಾಗಿಯಾಗಿದ್ದು, ಮಹತ್ವದ ಚರ್ಚೆ ನಡೆದಿದೆ. ಈ ಸಚಿವರು ಫೆ. 8, 12 ಮತ್ತು 15ರಂದೂ ರೈತರ ಜತೆ ಮಾತುಕತೆ ನಡೆಸಿದ್ದು ಅವು ಕೂಡ ಫಲಪ್ರದವಾಗಿರಲಿಲ್ಲ.

ಸರ್ಕಾರದ ಪ್ರಸ್ತಾವನೆ: ಪಂಜಾಬ್ ರೈತರಿಂದ ಮುಂದಿನ ಐದು ವರ್ಷಗಳವರೆಗೆ ದ್ವಿದಳ ಧಾನ್ಯಗಳು, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು ಕನಿಷ್ಠ ಸುರಕ್ಷತಾ ಬೆಲೆ(ಎಂಎಸ್​ಪಿ)ಯಲ್ಲಿ ಖರೀದಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಚಂಡೀಗಢದಲ್ಲಿ ಭಾನುವಾರ ಮಧ್ಯರಾತ್ರಿ ನಂತರ ನಡೆದ ಸಭೆಯಲ್ಲಿ ತಿಳಿಸಿದ್ದಾರೆ. ಎಂಎಸ್​ಪಿಯು ಬೆಳೆಗಳ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದಾಗ ರೈತರ ರಕ್ಷಣೆಗಾಗಿ ಸರ್ಕಾರ ನಿಗದಿಪಡಿಸುವ ಬೆಲೆಯಾಗಿದ್ದು, ಇದು ಸುರಕ್ಷತಾ ನಿವ್ವಳವಾಗಿ ಕಾರ್ಯನಿರ್ವಹಿಸುತ್ತದೆ ಎಂದೂ ಸಚಿವರು ವಿವರಿಸಿದರು. ಪ್ರಸ್ತಾವಿತ ಖರೀದಿಗಾಗಿ ರೈತರೊಂದಿಗೆ ಎನ್​ಸಿಸಿಎಫ್, ಎನ್​ಎಎಫ್​ಇಡಿ ಮುಂತಾದ ಸರ್ಕಾರಿ ಸಂಸ್ಥೆಗಳು ಮುಂದಿನ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಲಿದ್ದು, ಖರೀದಿಯ ಪ್ರಮಾಣದಲ್ಲೂ ಯಾವುದೇ ಮಿತಿ ಇರುವುದಿಲ್ಲ ಎಂದೂ ಹೇಳಿದರು.

ರೈತ ನಾಯಕರ ಪ್ರತಿಕ್ರಿಯೆ: ಸರ್ಕಾರದ ಸಂಧಾನ ಸೂತ್ರಕ್ಕೆ ಆರಂಭದಲ್ಲಿ ಪ್ರತಿಕ್ರಿಯಿಸಿದ್ದ ರೈತ ನಾಯಕ ಸರ್ವನ್ ಸಿಂಗ್ ಪಂಧೇರ್, ತಾವು ಇದನ್ನು ತಜ್ಞರ ಜತೆ ರ್ಚಚಿಸಿ ತಮ್ಮ ಮುಂದಿನ ನಡೆ 2 ದಿನಗಳ ಒಳಗೆ ತಿಳಿಸುವುದಾಗಿ ಹೇಳಿದ್ದರು. ಅಷ್ಟರೊಳಗೆ ತಮ್ಮ ಇತರ ಬೇಡಿಕೆಗಳೂ ಈಡೇರುವಂತಾಗಲಿ ಎಂದರು. ಬಳಿಕ ಸೋಮವಾರ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿದ್ದಾಗಿ ತಿಳಿಸಿದರು. ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಚಲೋಗೆ ವಿವಿಧ ರಾಜ್ಯಗಳಿಂದ ರೈತರು ಟ್ರಾ್ಯಕ್ಟರ್​ಗಳಲ್ಲಿ ಆಗಮಿಸಿದ್ದು, ಅವರನ್ನು ಪಂಜಾಬ್-ಹರಿಯಾಣ ಗಡಿಭಾಗದಲ್ಲಿ ತಡೆಯಲಾಗಿದೆ. ರೈತರು ಫೆ.21ರಂದು ಶಾಂತಿಯುತವಾಗಿ ದೆಹಲಿ ಚಲೋ ನಡೆಸಲಾಗುವುದು ಎಂದೂ ಪಂಧೇರ್ ತಿಳಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ರೈತರು ಮತ್ತು ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಕೂಡ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿದ್ದಾರೆ.

ಹೃದಯಾಘಾತಕ್ಕೆ ಬಲಿಯಾದ ರೈತ

ಪ್ರತಿಭಟನೆಗೆ ಬಂದಿದ್ದ ಪಟಿಯಾಲಾ ಜಿಲ್ಲೆಯ ಬತೊಯಿ ಕಾಳನ್ ಗ್ರಾಮದ ನರಿಂದರ್ ಪಾಲ್(45) ಎಂಬ ರೈತ ಪಟಿಯಾಲಾದಲ್ಲಿರುವ ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಅವರ ನಿವಾಸದ ಬಳಿ ಭಾನುವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಉಳಿಸಿಕೊಳ್ಳಲು ಆಗಲಿಲ್ಲ.

ರೈತರ ಬೇಡಿಕೆಗಳು

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತ್ರಿ, ಸಾಲಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, 60 ವರ್ಷ ಮೇಲ್ಪಟ್ಟ ರೈತರು ಮತ್ತು ಕೃಷಿ ಕಾರ್ವಿುಕರಿಗೆ ಪಿಂಚಣಿ, ಪ್ರತಿಭಟನೆ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾದ ಪೊಲೀಸ್ ಕೇಸುಗಳನ್ನು ಹಿಂಪಡೆಯುವುದು, ವಿದ್ಯುತ್ ಬಿಲ್ ಹೆಚ್ಚಿಸದಿರುವುದು, 2021ರ ಲಖಿಂಪುರ ಖೇರಿ ಹಿಂಸಾಚಾರ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು, 2020-21ರ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು, 2013ರ ಭೂಸ್ವಾಧೀನ ಕಾಯ್ದೆಯ ಮರುಸ್ಥಾಪನೆ ಮುಂತಾದವು ರೈತರ ಬೇಡಿಕೆಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net