

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಇದೀಗ ಮತ್ತೊಮ್ಮೆ ಸಿಬಿಐ ಶಾಕ್ ನೀಡಿದೆ. ಸದ್ಯ ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಮಾಡಿ, ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಡಿಕೆಶಿ ನ್ಯಾಷನಲ್ ಎಜ್ಯುಕೇಶನ್ ಫೌಂಡೇಶನ್ ಚೇರ್ಮನ್ ಆಗಿರುವ ಹಿನ್ನೆಲೆ ದಾಖಲೆಗಳನ್ನು ಪರಿಶೀಲಿಸಲು ಸಿಬಿಐ ಮುಂದಾಗಿದೆ ಎನ್ನಲಾಗಿದೆ.
ಸದ್ಯ ಡಿ.ಕೆ.ಶಿವಕುಮಾರ್ ಸಂಬಂಧಿಕರು ಹಾಗೂ ಡಿಕೆಶಿ ಜತೆಗೆ ವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿರುವವರಿಗೆ ಸಿಬಿಐ ನೊಟೀಸ್ ನೀಡಿ, ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಆರ್ಆರ್ ನಗರದಲ್ಲಿರುವ ಡಿಕೆಶಿ ಒಡೆತನದ ಗ್ಲೋಬಲ್ ಅಕಾಡೆಮಿ ಕಾಲೇಜಿನಲ್ಲಿ ಸಿಬಿಐ ಅಧಿಕಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಡಿಕೆಶಿ ಮತ್ತು ಐಶ್ವರ್ಯ ಅವರ ಅಸೆಟ್ಸ್ ವ್ಯಾಲ್ಯುಯೇಷನ್ಗೆ ಸಿಬಿಐ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ. ಫೈನಾನ್ಸ್ ವಿಭಾಗದಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ.
ಕಾಲೇಜಿಗೆ ಸಂಬಂಧಿಸಿದಂತೆ ಅಸೆಟ್ಸ್ ಮೌಲ್ಯಮಾಪನದ ಜತೆಗ ಅಡ್ಮಿಷನ್ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಪ್ರತೀ ವರ್ಷ ಎಷ್ಟು ವಿದ್ಯಾರ್ಥಿಗಳು ಅಡ್ಮಿಷನ್ ಆಗುತ್ತಾರೆ? ಎಷ್ಟು ಫೀಸ್ ಮತ್ತು ಡೊನೇಷನ್ ನಿಗದಿ ಮಾಡಲಾಗಿದೆ? ಮ್ಯಾನೇಜ್ಮೆಂಟ್ ಕೋಟಾ ಮತ್ತು ಸರ್ಕಾರಿ ಕೋಟಾದಡಿ ಎಷ್ಟು ಸೀಟ್ಗಳಿವೆ ಎಂಬುದರ ಬಗ್ಗೆ ಎಲ್ಲಾ ಆಯಾಮಗಳಲ್ಲಿ ಸಿಬಿಐ ಪರಿಶೀಲನೆ ನಡೆದಿದೆ. ಡಿಕೆಶಿ ಒಡೆತನದ ಗ್ಲೋಬಲ್ ಕಾಲೇಜಿನಲ್ಲಿ ಎಂಬಿಎ ಮತ್ತು ಬಿಇ ಕೋರ್ಸ್ಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.