ಕಾವೇರಿ 2.0 ಗೊಂದಲಕ್ಕೆ ತೆರೆ

Kaveri F
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯದಿಂದ ಕಾವೇರಿ 2.0 ತಂತ್ರಾಂಶದಲ್ಲಿ ದಸ್ತಾವೇಜು ರಿಜಿಸ್ಟ್ರೇಷನ್‌ಗೆ ಎದುರಾಗಿದ್ದ ಕೆಲ ಸಮಸ್ಯೆಗಳನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಗೆಹರಿಸಿ ಸರಳಗೊಳಿಸಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ, ಸಾಲಸೌಲಭ್ಯ ಪಡೆಯುವ ಜನರಿಗೆ ಮತ್ತು ಸಾಲ ಕೊಡುವ ಹಣಕಾಸು ಸಂಸ್ಥೆಗಳಿಗೆ ಅನುಕೂಲವಾಗಲಿದೆ.

ಹೌದು.. ಸ್ಥಿರಾಸ್ತಿಗಳ ನೋಂದಣಿಗೆ ಭೂಮಿ, ಇ-ಸ್ವತ್ತು, ಇ-ಆಸ್ತಿ ತಂತ್ರಾಂಶದಿಂದ ನೇರ ಮಾಹಿತಿ ಪಡೆದು ದಸ್ತಾವೇಜು ನೋಂದಣಿ ಮಾಡಬೇಕು. ಯಾವುದೇ ಕಾರಣಕ್ಕೂ ಕೈಬರಹ ಅಥವಾ ಭೌತಿಕ ಖಾತಾ ಪಡೆದು ನೋಂದಣಿ ಮಾಡಬಾರದು ಎಂದು ಕಂದಾಯ ಇಲಾಖೆ ಕಟ್ಟಾಜ್ಞೆ ಮಾಡಿದೆ.

ಆದರಿಂದ ಇ-ಖಾತಾ ಪಡೆದು ಸೈಟ್, ಮನೆ, ಕಟ್ಟಡ ಮತ್ತು ವಾಣಿಜ್ಯ ಪ್ರದೇಶಗಳನ್ನು ನೋಂದಣಿ ಮಾಡಲು ಹೋದಾಗ ಕಾವೇರಿ 2.0 ತಂತ್ರಾಂಶದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇದರಿಂದ ಸಾರ್ವಜನಿಕರಿಗೆ ಮತ್ತು ಹಣಕಾಸು ಸಂಸ್ಥೆಗಳು, ಕಂಪನಿ, ಕೈಗಾರಿಕೆಗಳಿಗೆ ಸಮಸ್ಯೆ ಎದುರಾಗಿದ್ದವು. ಆದರಿಂದ ಕಾವೇರಿ 2.0 ತಂತ್ರಾಂಶದಲ್ಲಿ ಒಂದೊಂದಾಗಿ ಸಮಸ್ಯೆ ಬಗೆಹರಿಸುವಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂದಾಗಿದೆ.

ಬಗರ್ ಹುಕುಂ ಸ್ವತ್ತುಗಳು ನೋಂದಣಿಗೆ ಸಂಬಂಧಿಸಿದಂತೆ ಕಾವೇರಿ 2.0 ತಂತ್ರಾಂಶದಲ್ಲಿ ನೂತನ ಕ್ರಮ ವಹಿಸಲಾಗಿದೆ. ಆರ್ಟಿಕಲ್ ಮತ್ತು ಸಬ್ ಆರ್ಟಿಕಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಕಾವೇರಿ 2.0ರಲ್ಲಿ ಇರಲಿಲ್ಲ. ಇದರಿಂದ ಬಗರ್ ಹುಕ್ಕಂ ಸ್ವತ್ತುಗಳ ರಿಜಿಸ್ಟ್ರೇಷನ್‌ಗೆ ತಾಂತ್ರಿಕ ಸಮಸ್ಯೆ ಎದುರಾಗಿ ಕಾನೂನು ತೊಡಕು ಸಹ ಉಂಟಾಗಿತ್ತು.

ಅದೇ ರೀತಿಯಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಪತ್ರಗಳ (ಟಿಡಿಆರ್) ನೋಂದಣಿ ಸಮಯದಲ್ಲಿ ದಸ್ತಾವೇಜುಗಳ ನೋಂದಣಿಗೆ ಕಾವೇರಿ 2.0 ತಂತ್ರಾಂಶದಲ್ಲಿ ಮಾಹಿತಿ ನಮೂದಿಸುವಾಗ ದಸ್ತಾವೇಜು ಮಾದರಿ, ಆರ್ಟಿಕಲ್ ಮತ್ತು ಸಬ್ ಆರ್ಟಿಕಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.

ಉಪ ಗುತ್ತಿಗೆ

ಸಾಮಾನ್ಯವಾಗಿ ಗುತ್ತಿಗೆ ದಸ್ತಾವೇಜುಗಳ ನೋಂದಣಿ ಮಾಡಿಕೊಳ್ಳುವಾಗ ವಾರಸುದಾರ ಮತ್ತು ಗುತ್ತಿಗೆದಾರರ ನಡುವೆ ರಿಜಿಸ್ಟ್ರೇಷನ್ ಆಗುತ್ತಿತ್ತು. ಇದನ್ನು ಇ-ಖಾತಾ (ಇ-ಸ್ವತ್ತು, ಇ-ಆಸ್ತಿ, ಬಿಬಿಎಂಪಿ ಯುಎಲ್‌ಎಂಎಸ್)ಗಳಿಂದ ಸ್ವತ್ತಿನ ಮಾಲೀಕರ ಮಾಹಿತಿ ಪಡೆದು ನೋಂದಣಿ ಮಾಡಲಾಗುತ್ತಿತ್ತು. ಆದರೆ, ಉಪ ಗುತ್ತಿಗೆ ರಿಜಿಸ್ಟ್ರೇಷನ್ ಮಾಡಲು ತಾಂತ್ರಿಕ ಸಮಸ್ಯೆ ಇತ್ತು. ಗುತ್ತಿಗೆದಾರ ತಾನು ಪಡೆದ ಕೆಲಸವನ್ನು ಉಪ ಗುತ್ತಿಗೆ ನೀಡುವಾಗ ಇ-ಖಾತಾದ ಪಿಐಡಿ ನಂಬರ್ ನಮೂದು ಮಾಡಿದಾಗ ಮೂಲ ಮಾಲೀಕರು ಮತ್ತು ಸ್ವತ್ತಿನ ಸಂಪೂರ್ಣ ಮಾಹಿತಿ ಪಡೆಯುತ್ತಿತ್ತು. ಇದೀಗ ಉಪ ಗುತ್ತಿಗೆ ನೋಂದಣಿ ವೇಳೆ ಸ್ವತ್ತಿನ ಚಕ್ಕುಬಂದಿ ಮಾಹಿತಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಪರಿತ್ಯಾಜನ ಪತ್ರ

ಪರಿತ್ಯಾಜನ ಪತ್ರ ನೋಂದಣಿ ವೇಳೆ ಇ-ಸ್ವತ್ತು ಅಥವಾ ಇ-ಆಸ್ತಿ ತಂತ್ರಾಂಶದಲ್ಲಿ ಸ್ವತ್ತಿನ ಮಾಲೀಕರ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಮಾಹಿತಿ ತಿದ್ದುಪಡಿ ಮಾಡಲು ಕಾವೇರಿ 2.0ರಲ್ಲಿ ಅವಕಾಶ ಇರಲಿಲ್ಲ. ಆದರಿಂದ ಒಟ್ಟು ವಿಸ್ತೀರ್ಣದಲ್ಲಿ ಎಷ್ಟು ಭಾಗಾಂಶ ಮತ್ತು ಯಾವ ಚಕ್ಕುಬಂದಿಯಲ್ಲಿ ಪರಿತ್ಯಾಜನ ಪತ್ರ ಮಾಡಿಕೊಡಲಾಗುತ್ತಿದೆ ಎಂಬುದನ್ನು ನಮೂದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಇದಕ್ಕೂ ಅವಕಾಶ ಕಲ್ಪಿಸಿದ್ದು, ಇ-ಖಾತಾದಿಂದ ವಿಸ್ತೀರ್ಣ ಮಾಹಿತಿ ಪಡೆದುಕೊಂಡು ವಿಸ್ತೀರ್ಣ ಮತ್ತು ಚಕ್ಕುಬಂದಿ ತಿದ್ದುಪಡಿ ಮಾಡಬಹುದಾಗಿದೆ.

ಹಕ್ಕು ಒತ್ತೆ ಪತ್ರ

ಬ್ಯಾಂಕ್‌ನಿಂದ ಸಾಲ ಪಡೆದು ಸ್ಥಿರಾಸ್ತಿ ಖರೀದಿ ಮಾಡಿದಾಗ ಇ-ಖಾತಾ ಮೂಲಕ ಸ್ವತ್ತಿನ ಮಾಲೀಕರ ಹೆಸರು ಪಡೆದು ಖರೀದಿದಾರರ ಹೆಸರಿಗೆ ನೋಂದಣಿ ಮಾಡಲಾಗುತ್ತದೆ. ಬಳಿಕ ಬ್ಯಾಂಕ್ ಹೆಸರಿಗೆ ಡಿಟಿಡಿ ಮಾಡುವಾಗ ಪಿಐಡಿ ನಂಬರ್ ನಮೂದು ಮಾಡಿದಾಗ ಮಾರಾಟಗಾರರ ಹೆಸರು ಬರುತ್ತಿತ್ತು. ಅಲ್ಲದೆ, ಆತನ ಹೆಸರಿನಲ್ಲಿಯೇ ಸಾಲ ಪಡೆದಂತೆ ಗೊಂದಲ ಉಂಟಾಗುತ್ತಿತ್ತು. ಆದರಿಂದ ಡಿಟಿಟಿ ನೋಂದಣಿ ವೇಳೆ ಕಾವೇರಿ 2.0ನಲ್ಲಿ ಮಾಲೀಕರ ಹೆಸರು, ವಿಳಾಸ ತಿದ್ದುಪಡಿಗೆ ಅವಕಾಶ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net