

Blind Wife : ಸಂಗಾತಿಯೊಂದಿಗಿನ ಸಣ್ಣ ಭಿನ್ನಾಭಿಪ್ರಾಯವೂ ದೊಡ್ಡ ಜಗಳಕ್ಕೆ ಕಾರಣವಾಗಿ ನಂತರ ವಿಚ್ಛೇದನದಲ್ಲಿ ಕೊನೆಯಾಗುತ್ತಿರುವುದು ಇಂದು ಸಾಮಾನ್ಯವಾಗಿದೆ. ತಮ್ಮ ಸಂಗಾತಿಯ ಆರೋಗ್ಯ ಸಮಸ್ಯೆಗಳನ್ನೂ ವಿಚ್ಛೇದನಕ್ಕೆ ಕಾರಣವಾಗಿ ಬಳಸುವವರು ಹಲವರಿದ್ದಾರೆ. ಆದರೆ, ಚೀನಾದ ಈ ದಂಪತಿಯ ಜೀವನದ ಕತೆಯು ಪ್ರೀತಿ, ಸಂಬಂಧದ ನಿಜವಾದ ಅರ್ಥಕ್ಕೆ ಕನ್ನಡಿ ಹಿಡದಂತಿದೆ. ತನ್ನ ಕುರುಡು ಅಥವಾ ಅಂಧ ಪತ್ನಿಯನ್ನು ನೋಡಿಕೊಳ್ಳುತ್ತಿರುವ ಗಂಡ, ಸಂಬಂಧಗಳ ಮೌಲ್ಯಕ್ಕೆ ನೇರ ಸಾಕ್ಷಿಯಾಗಿದ್ದಾನೆ.
ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಈ ವ್ಯಕ್ತಿ ಹೆಚ್ಚು ಸದ್ದು ಮಾಡುತ್ತಿದ್ದಾನೆ. ಒಂದು ದಶಕಕ್ಕೂ ಹೆಚ್ಚು ಕಾಲ ದೃಷ್ಟಿ ಕಳೆದುಕೊಂಡಿರುವ ತನ್ನ ಹೆಂಡತಿಯನ್ನು ಈತ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾನೆ. ಚೀನಾದ ಸಾಮಾಜಿಕ ಜಾಲತಾಣವು ಈ ವ್ಯಕ್ತಿಯನ್ನು ಆದರ್ಶ ಪತಿ ಎಂದು ಹೊಗಳುತ್ತಿದೆ. 39 ವರ್ಷದ ಲಿ ಜುಕ್ಸಿನ್ ಮತ್ತು ಅವರ ಪತ್ನಿ ಜಾಂಗ್ ಕ್ಸಿಯಿಂಗ್ ಅವರ ಕಥೆ ಎಲ್ಲರ ಹೃದಯವನ್ನು ಸ್ಪರ್ಶಿಸುತ್ತಿದೆ.
ದಕ್ಷಿಣ ಶಾಂಡೊಂಗ್ ಪ್ರಾಂತ್ಯದ ಕ್ವಿಂಗ್ಡಾವೊದಲ್ಲಿ ಕಾರು ರಿಪೇರಿ ಅಂಗಡಿ ನಡೆಸುತ್ತಿರುವ ಲಿ, 2008 ರಲ್ಲಿ ಜಾಂಗ್ ಕ್ಸಿಯಿಂಗ್ ಅವರನ್ನು ವಿವಾಹವಾದರು. ದಂಪತಿಗೆ ಒಂದು ಹೆಣ್ಣು ಮಗು ಜನಿಸಿತು. 2013 ರಲ್ಲಿ ಜಾಂಗ್‌ಗೆ ಗಂಭೀರ ಕಣ್ಣಿನ ಕಾಯಿಲೆ ಇರುವುದು ಪತ್ತೆಯಾಗುವವರೆಗೂ ದಂಪತಿ ಸಂತೋಷ ಮತ್ತು ಸಾಮಾನ್ಯ ಜೀವನವನ್ನು ನಡೆಸಿದರು. ಅವರು ಚಿಕಿತ್ಸೆಗಾಗಿ ಅರ್ಧ ಮಿಲಿಯನ್ ಯುವಾನ್ (ಸುಮಾರು 70,000 ಯುಎಸ್ ಡಾಲರ್) ಖರ್ಚು ಮಾಡಿದ್ದಾರೆ.
ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ನೀಡಿದಾದರೂ 2014, ಜೂನ್ ತಿಂಗಳಲ್ಲಿ ಜಾಂಗ್ ತನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಳು. ನನಗೆ ಏನೂ ಕಾಣಲಿಲ್ಲ. ನನ್ನ ಮಗಳನ್ನು ನೋಡಲು ಸಹ ಸಾಧ್ಯವಾಗಲಿಲ್ಲ. ನನ್ನ ಜೀವನ ಒಂದು ರೀತಿಯಲ್ಲಿ ಸ್ವರ್ಗದಿಂದ ನರಕಕ್ಕೆ ಪರಿವರ್ತನೆಯಾದಂತಿದೆ ಎಂದು ಜಾಂಗ್ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ದುಃಖದ ಸಮಯದಲ್ಲಿ ಜಾಂಗ್ ಬೆನ್ನಿಗೆ ನಿಂತಿದ್ದು ಆಕೆ ಪತಿ ಲಿ. ಆಕೆಯನ್ನು ಸಮಾಧಾನಪಡಿಸಿ, ಭವಿಷ್ಯದಲ್ಲಿ ಯಾವಾಗಲೂ ಆಕೆಯೊಂದಿಗೆ ಇರುವುದಾಗಿ ಭರವಸೆ ನೀಡಿದನು. ಲಿ ತಾನು ಹೋದಲ್ಲೆಲ್ಲಾ ಜಾಂಗ್‌ಳನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ. ಪತಿಯ ಪ್ರಯತ್ನಗಳ ಫಲವಾಗಿ ಆಕೆ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ಮಾಡಲು ಪ್ರಾರಂಭಿಸಿದ್ದಾರೆ. ಅಡುಗೆಯನ್ನು ಸಹ ಮಾಡುತ್ತಾರೆ. ಇವರ ಕತೆ ಎಷ್ಟೋ ದಂಪತಿಗೆ ಒಂದು ಮಾದರಿ ಎನ್ನಬಹುದಾಗಿದೆ. (ಏಜೆನ್ಸೀಸ್)