ದುಲ್ಕರ್ ಸಲ್ಮಾನ್​ಗೆ ತಟ್ಟಿದ ಆಪರೇಷನ್ ನಮ್ಖೋರ್ ಬಿಸಿ:​ ಎರಡು ಕಾರುಗಳು ಸೀಜ್​, ಸಮನ್ಸ್ ಜಾರಿ! Dulquer Salmaan

Dulquer Salmaan
Published on

Dulquer Salmaan : ತೆರಿಗೆ ವಂಚನೆ ಮಾಡಿ ಭೂತಾನ್‌ನಿಂದ ಭಾರತಕ್ಕೆ ಐಷಾರಾಮಿ ಕಾರುಗಳನ್ನು ತರಲಾಗಿದೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಇಂದು (ಸೆ.23) ನಡೆಸಿದ ದಾಳಿಯಲ್ಲಿ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರಿಗೆ ಸಂಬಂಧಿಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೋಯಿಕ್ಕೋಡ್ ಮತ್ತು ಮಲಪ್ಪುರಂನಿಂದ 11 ವಾಹನಗಳನ್ನು ಸಹ ಸೀಜ್​ ಮಾಡಲಾಗಿದೆ.

ವಶಪಡಿಸಿಕೊಂಡ ಕಾರುಗಳ ಜೊತೆಗೆ, ಹೆಚ್ಚಿನ ವಾಹನಗಳಿದ್ದರೆ ಹಾಜರುಪಡಿಸುವಂತೆ ದುಲ್ಕರ್‌ಗೆ ಸಮನ್ಸ್ ಜಾರಿ ಮಾಡಲಾಗಿದೆ. ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನ ಏಳು ಸ್ಥಳಗಳಿಂದ 11 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಾಹನಗಳನ್ನು ಕರಿಪುರ ವಿಮಾನ ನಿಲ್ದಾಣದ ಕಸ್ಟಮ್ಸ್ ಕಚೇರಿಗೆ ತರಲಾಗುವುದು. ಆಪರೇಷನ್ ನಮ್ಖೋರ್ ಭಾಗವಾಗಿ ದೇಶಾದ್ಯಂತ ಈ ದಾಳಿ ನಡೆದಿದೆ. ಇದರಲ್ಲಿ ಕೇರಳವೇ ಪ್ರಮುಖವಾಗಿದೆ. ಕೇರಳದ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದ್ದು, ಈ ಬಗ್ಗೆ ಕಸ್ಟಮ್ಸ್ ಆಯುಕ್ತರು ಸಂಜೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭೂತಾನಿನ ಸೇನೆಯಿಂದ ಕೈಬಿಡಲ್ಪಟ್ಟ ಮತ್ತು ಹಳೆಯ ವಾಹನಗಳ ವರ್ಗಕ್ಕೆ ಸೇರಿದ ಸುಮಾರು 150 ವಾಹನಗಳನ್ನು ಭಾರತಕ್ಕೆ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದ ಬಳಿಕ ಈ ದಾಳಿಗಳನ್ನು ಮಾಡಲಾಗಿದೆ. ಈ ವಾಹನಗಳಲ್ಲಿ ಸುಮಾರು 20 ವಾಹನಗಳು ಕೇರಳವನ್ನು ತಲುಪಿವೆ ಎಂಬ ಮಾಹಿತಿಯೂ ತನಿಖಾ ಸಂಸ್ಥೆಗಳಿಗೆ ತನಿಖೆ ವೇಳೆ ಸಿಕ್ಕಿತ್ತು.

ಗುಪ್ತಚರ ವರದಿಯ ಆಧಾರದ ಮೇಲೆ, ಕಂದಾಯ ಗುಪ್ತಚರ ನಿರ್ದೇಶನಾಲಯವು ಈ ಹಿಂದೆ ಈ ಸಂಬಂಧ ತನಿಖೆ ನಡೆಸಿತ್ತು. ಕಳ್ಳಸಾಗಣೆ ಮಾಡಿದ ವಾಹನಗಳಲ್ಲಿ ಲ್ಯಾಂಡ್ ಕ್ರೂಸರ್ ಮತ್ತು ಲ್ಯಾಂಡ್ ರೋವರ್ ಕೂಡ ಸೇರಿವೆ. ಅಧಿಕಾರಿಗಳು ಮತ್ತು ಏಜೆಂಟ್‌ಗಳನ್ನು ಒಳಗೊಂಡ ಒಂದು ಜಾಲವು ವಾಹನಗಳನ್ನು ಕಳ್ಳಸಾಗಣೆ ಮತ್ತು ನೋಂದಾಯಿಸಲು ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಮಾಹಿತಿಯ ನಂತರ, ಮೋಟಾರು ವಾಹನ ಇಲಾಖೆಯೂ ಘಟನೆಯ ಬಗ್ಗೆ ತನಿಖೆ ಆರಂಭಿಸಿತ್ತು. ಭೂತಾನಿನ ವಾಹನಗಳನ್ನು ಖರೀದಿಸಿದ ಕೆಲವರನ್ನು ಗುರುತಿಸಲಾಗಿದೆ ಎಂದು ಈ ಹಿಂದೆ ವರದಿಗಳಿದ್ದವು. ಈ ಗ್ಯಾಂಗ್ ಕಡಿಮೆ ಬೆಲೆಗೆ ಹರಾಜಿಗೆ ಇಡಲಾದ ವಾಹನಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತದೆ. 1 ಲಕ್ಷ ರೂ.ಗೆ ಖರೀದಿಸಿದ ಕಾರನ್ನು 10 ಲಕ್ಷ ರೂ.ಗೆ ಮತ್ತು 3 ಲಕ್ಷ ರೂ.ಗೆ ಖರೀದಿಸಿದ ಕಾರನ್ನು 30 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಕಂಡುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net