ಚಿಕನ್​ ಮಾಡುವಂತೆ ಕೇಳಿಕೊಂಡರೂ ಕೇವಲ ಅನ್ನ-ಚಟ್ನಿ ಕೊಡ್ತಿದ್ದ ಪತ್ನಿ: ಬೇಸತ್ತು ಸಾವಿಗೆ ಶರಣಾದ 25 ವರ್ಷದ ಯುವಕ! Chicken

Chicken
Published on

Chicken : ಮಾಂಸಾಹಾರ ಅನೇಕರ ನೆಚ್ಚಿನ ಆಹಾರ. ಎಷ್ಟರ ಮಟ್ಟಿಗೆ ಅಂದ್ರೆ ನಾನ್​ ವೆಜ್​ ಮಾಡಲಿಲ್ಲ ಅಂತ ಎಷ್ಟೋ ಸಭೆ ಸಮಾರಂಭಗಳು ಅರ್ಧದಲ್ಲೇ ರದ್ದಾದ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ದಿನಕ್ಕೆ ಒಂದು ಪೀಸ್​ ಮಾಂಸ ತಿನ್ನದೇ ಹೋದರೆ ಸಮಾಧಾನ ಆಗುವುದಿಲ್ಲ ಎಂದು ಹೇಳೋರು ಕೂಡ ಇದಾರೆ. ಅಷ್ಟರಮಟ್ಟಿಗೆ ನಾನ್​ ವೆಜ್​ಗೆ ತುಂಬಾ ಅಡಿಕ್ಟ್​ ಆಗಿದ್ದಾರೆ. ನಾನ್​ ವೆಜ್​ ಇಲ್ಲ ಅಂದ್ರೆ ಪ್ರಾಣ ಬಿಡುವವರು ಕೂಡ ಇದಾರೆ. ಅದಕ್ಕೆ ತಾಜಾ ಉದಾಹರಣೆ ಈ ಒಂದು ಘಟನೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯೆರ್ರಗೊಂಡಪಾಲೆಂ ಮಂಡಲದ ಗೊಲ್ಲವಿದಿಪಿ ಗ್ರಾಮದಲ್ಲಿ 25 ವರ್ಷದ ಲಕ್ಷ್ಮೀನಾರಾಯಣ ಎಂಬ ಯುವಕ ಸಾವಿಗೆ ಶರಣಾಗಿದ್ದಾನೆ. ಸೋಮವಾರ (ಸೆ. 22) ತನ್ನ ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಅದೇ ನೋವಿನಲ್ಲಿ ಸಾವನ್ನಪ್ಪಿದ್ದಾನೆ.

ಲಕ್ಷ್ಮೀನಾರಾಯಣ್​ಗೆ ಚಿಕನ್​ ಅಂದರೆ ಪಂಚ ಪ್ರಾಣ. ಚಿಕನ್​ ಮಾಡಿಕೊಡುವಂತೆ ಪ್ರತಿದಿನ ತನ್ನ ಪತ್ನಿಯನ್ನು ಕೇಳುತ್ತಿದ್ದ. ಆದರೆ, ಆಕೆ ಮಾತ್ರ ಕೇವಲ ಅನ್ನ ಮತ್ತು ಚಟ್ನಿಯನ್ನು ನೀಡುತ್ತಿದ್ದಳು. ಕಳೆದ ಭಾನುವಾರವೂ ಚಿಕನ್​ ಮಾಡುವಂತೆ ಮನವಿ ಮಾಡಿದ್ದ. ಆದರೆ, ಪತ್ನಿ ಅದ್ಯಾವುದಕ್ಕೂ ಕಿವಿಗೊಡದಿದ್ದಾಗ ಅದೇ ನೋವಿನಲ್ಲಿ ತಮ್ಮ ಹೊಲಕ್ಕೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಲಕ್ಷ್ಮೀನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ತಂದೆಯ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆಯಿಂದ ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ. ನಿಜಕ್ಕೂ ಒಂದು ಆಘಾತಕಾರಿ ಘಟನೆ. ಈ ರೀತಿಯ ಕೌಟುಂಬಿಕ ಸಮಸ್ಯೆಗಳನ್ನು ಸಮಾಧಾನವಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಇಲ್ಲಿ ಬಗೆಹರಿಯದ ಸಮಸ್ಯೆ ಯಾವುದೇ ಇಲ್ಲ. ಅದಕ್ಕಾಗಿ ಪ್ರಾಣ ಕೊಡುವುದು ಸರಿಯಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net